ಬೇಸಿಗೆಯಲ್ಲಿ ಕುಡಿವ ನೀರು ಕೊರತೆ ಆಗದಿರಲಿ: ಎಸ್.ಆರ್.ಉಮಾಶಂಕರ್
KannadaprabhaNewsNetwork | Published : Oct 08 2023, 12:02 AM IST
ಬೇಸಿಗೆಯಲ್ಲಿ ಕುಡಿವ ನೀರು ಕೊರತೆ ಆಗದಿರಲಿ: ಎಸ್.ಆರ್.ಉಮಾಶಂಕರ್
ಸಾರಾಂಶ
ಗೃಹಲಕ್ಷ್ಮಿ, ಗೃಹಜ್ಯೋತಿ ಹಣ ತಲುಪದವರಿಗೆ ಅಧಿಕಾರಿಗಳು ಸ್ಪಂದಿಸಲು ಸಲಹೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯದಲ್ಲೇ ಬರಗಾಲವಿದೆ. ಅತಿ ಹೆಚ್ಚು ಮಳೆಯಾಗುವ ಶಿವಮೊಗ್ಗ ಜಿಲ್ಲೆಯಲ್ಲೂ ಈ ಬಾರಿ ಮಳೆ ಕೊರತೆಯಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಢಿಯಾಗಬಹುದು. ಹೀಗಾಗಿ ಈನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಬಾರಿ ಉತ್ತಮ ಮಳೆಯಾಗಿದ್ದರೂ, ಬೇಸಿಗೆಯಲ್ಲಿ ಗ್ರಾಮೀಣಾ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಗಮನಕ್ಕೆ ಬಂದಿದೆ ಎಂದರು. ಎಚ್ಚರ ವಹಿಸಿ: ಈ ಬಾರಿ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದೆ. ಹೀಗಾಗಿ ಈ ಬಾರಿ ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದು. ಆದರೆ, ಎಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಠಿಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳ ಲಾಭ ಪಡೆಯದೇ ಉಳಿದಿರುವ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯ ಒದಗಿಸಬೇಕು. ಗೃಹಲಕ್ಷ್ಮೀ ಯೋಜನೆಯಡಿ ಸೌಲಭ್ಯಕ್ಕಾಗಿ ಹೆಸರು ನೋಂದಾಯಿಸಿರುವ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಗೊಂಡಿರುವ ಹಾಗೂ ಹಲವು ತಾಂತ್ರಿಕ ಕಾರಣಗಳಿಂದಾಗಿ ಸೌಲಭ್ಯ ಪಡೆಯದಿರುವವರನ್ನು ಗುರುತಿಸಿ, ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಿಕ್ಷಣ ಇಲಾಖೆ ವತಿಯಿಂದ ನಿರ್ಮಾಣ ಹಂತದಲ್ಲಿರುವ ನೂತನ ಕಟ್ಟಡ ಕಾಮಗಾರಿಗಳಿಗೆ ವೇಗ ಹೆಚ್ಚಿಸಬೇಕು. ಕಟ್ಟಡಗಳ ದುರಸ್ತಿಗೆ ಬಿಡುಗಡೆಯಾದ ಅನುದಾನ ಸಕಾಲದಲ್ಲಿ ಉದ್ದೇಶಿತ ಕೆಲಸಕ್ಕಾಗಿಯೇ ಬಳಸಬೇಕು. ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು, ಕೂಡಲೇ ಅನುದಾನ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶೇ.79ರಷ್ಟು ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಿಂದಾಗಿ ಪ್ರತಿ ಮಾಹೆ ₹9 ಕೋಟಿಗಳ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಭದ್ರಾವತಿ ತಾಲೂಕು ಕಚೇರಿಯ ವಿದ್ಯುತ್ ಬಿಲ್ ₹10 ಲಕ್ಷ ಬಾಕಿಯಿದ್ದು, ಕೂಡಲೇ ಪಾವತಿಸಲು ಸೂಚನೆ ನೀಡುವಂತೆ ಮೆಸ್ಕಾಂ ಸೂಪರಿಂಟೆಂಡೆಂಟ್ ಅವರು ಮನವಿ ಮಾಡಿದರು. ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. - - - ಬಾಕ್ಸ್ 16ರಂದು ಪ್ರಗತಿ ಪರಿಶೀಲನಾ ಸಭೆ: ಡಿಸಿ ಜಿಲ್ಲಾ ಮಟ್ಟದ ಜನತಾದರ್ಶನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಇಲಾಖಾವಾರು ವಿಂಗಡಿಸಿ, ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಅ.16ರಂದು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ಪ್ರಸಕ್ತ ಸಾಲಿನಲ್ಲಿ ವರದಿ ಆಗಿರುವ 24 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 16 ಅರ್ಹ ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಅವುಗಳಲ್ಲಿ 4 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಉಳಿದ 4 ಪ್ರಕರಣಗಳನ್ನು ವೈದ್ಯಕೀಯ ವರದಿ ಪಡೆದು, ಶೀಘ್ರದಲ್ಲಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. - - - ಕೋಟ್ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ₹80 ಕೋಟಿ ಬೆಳೆ ನಷ್ಟ ಆಗಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಶೇ.57ರಷ್ಟು ಭತ್ತ, ಶೇ.85ರಷ್ಟು ಮೆಕ್ಕೆಜೋಳದ ಬೆಳೆ ನಷ್ಟವಾಗಿದ್ದು, ಒಟ್ಟು ಶೇ.68ರಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ - ಪೂರ್ಣಿಮಾ, ಜಂಟಿ ಕೃಷಿ ನಿರ್ದೇಶಕಿ - - - -7ಎಸ್‌ಎಂಜಿಕೆಪಿ05: ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮಾತನಾಡಿದರು.