ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಧಿಕಾರಿ ಜಿ.ಪಿ.ರೇಣುಪ್ರಸಾದ್ ಸಲಹೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಈ ಬಾರಿ ವಾತಾವರಣದಲ್ಲಿ ಹೆಚ್ಚಿನ ವ್ಯತ್ಯಾಸವಾಗಿದ್ದು, ಬಿರು ಬೇಸಿಗೆ ಎಲ್ಲರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳು ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಜಿ.ಪಿ ರೇಣುಪ್ರಸಾದ್ ಸಲಹೆ ನೀಡಿದ್ದಾರೆ.

ಹವಾಮಾನ ವೈಪರಿತ್ಯದಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ಕುರಿತು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಿಗೆ ಆಗುವ ಆರೋಗ್ಯ ಸಮಸ್ಯೆಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಸಂಬಂಧ ಅವಶ್ಯಕ ಪೂರ್ವಸಿದ್ಧತೆ ಮಾಡಿಕೊಂಡು ವಿಶೇಷ ಕಾಳಜಿವಹಿಸಿ ಆರೋಗ್ಯ ಸೇವೆ ನೀಡಬೇಕು. ಬಿಸಿಲಾಘಾತ, ನಿರ್ಜಲೀಕರಣದಿಂದ ಬಳಲುವ ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದರು.

ಜಿಲ್ಲಾ ಜಾರಿ ಅಧಿಕಾರಿ ಡಾ.ಡಿ.ಎಂ.ಅಭಿನವ ಮಾತನಾಡಿ, ಅಂತರ ಇಲಾಖೆಯ ಸಮನ್ವಯದೊಂದಿಗೆ ಸಭೆ ಸಮಾರಂಭಗಳಲ್ಲಿ ಸಾರ್ವಜನಿಕರು ತಾಪಮಾನದಿಂದ ರಕ್ಷಿಸಿಕೊಳ್ಳುವ ಬಗ್ಗೆ ಹಾಗೂ ದೇಹ ನಿರ್ಜಲೀಕರಣ ವಾಗದಂತೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಯೋಜನಾಧಿಕಾರಿ ಡಾ.ಕಾಶಿ ಮಾತನಾಡಿ, ಸಾರ್ವಜನಿಕರು ಸೂರ್ಯಘಾತದಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನ ಶ್ರಮದಾಯಕ ಕೆಲಸ ಮಾಡಬಾರದು. ತಿಳಿ ಬಣ್ಣದ ಸಡಿಲವಾದ ಕಾಟನ್ ಬಟ್ಟೆಗಳನ್ನು ಧರಿಸಬೇಕು. ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವಾಗ ವಿಶ್ರಾಂತಿ ಪಡೆಯಬೇಕು. ನಿರ್ಜಲೀಕರಣ ತಡೆಯಲು ಹೆಚ್ಚು ಸಕ್ಕರೆಯುತ ಅಥವಾ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯಬಾರದು. ಸೂರ್ಯಘಾತವಾದರೆ ತಣ್ಣಗಿನ ಸ್ಥಳದಲ್ಲಿ ವ್ಯಕ್ತಿಯನ್ನು ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ವರೆಸಬೇಕು, ಕುಡಿಯಲು ಆಗಾಗ್ಗೆ ನೀರು ಕೊಡುವುದು, ವ್ಯಕ್ತಿ ಚೇತರಿಸಿಕೊಂಡ ನಂತರ ನೀರಿನಂಶವಿರುವ ಪದಾರ್ಥಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. ಆದಷ್ಟು ಜೀರ್ಣಕ್ರಿಯೆ ಆಗುವ ಆಹಾರ ಪದಾರ್ಥಗಳ ಬಳಕೆ ಮಾಡುತ್ತಾ ಮನೆಯಲ್ಲಿ ದೊರೆಯುವ ಮಜ್ಜಿಗೆ, ಎಳನೀರು, ನೀರಿನಂಶ ಇರುವ ಸೌತೆಕಾಯಿ ಮೂಲಂಗಿ, ಸೊಪ್ಪು ತರಕಾರಿ ಬಳಸಬೇಕು ಎಂದರು. ವೀಡಿಯೋ ಸಂವಾಧದಲ್ಲಿ ವೈದ್ಯಾಧಿಕಾರಿಗಳು ಮತ್ತು ವಿವಿಧ ವೃಂದದ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.