ನಗರ ಪ್ರದೇಶದ ಜನರಿಗೆ ಸಿಗುವ ಗುಣಮಟ್ಟದ ಚಿಕಿತ್ಸೆ ಗ್ರಾಮೀಣ ಜನರಿಗೆ ದೊರೆಯದ ಕಾರಣ ಇಂತಹ ಶಿಬಿರಗಳ ಪ್ರಯೋಜನ ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು

ಕಾರಟಗಿ: ಮಾನವನ ಅಂಗಾಂಗಳಲ್ಲಿ ಕಣ್ಣು ಬಹುಮುಖ್ಯ. ಆರೋಗ್ಯದಲ್ಲಿ ಕಣ್ಣನ್ನು ಸದಾ ಎಚ್ಚರಿಕೆಯಿಂದ ಕಾಳಜಿ ವಹಿಸಿ ಎಂದು ಅಗ್ನಿಕೊಂಡ ದ್ಯಾವಮ್ಮ ದೇವಿ ಆರಾಧಕ ಭೀಮೇಶಪ್ಪ ಅಪ್ಪಾಜಿ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಜಿ ಸಚಿವ ಶಿವರಾಜ ಎಸ್.ತಂಗಡಗಿ, ಆಸರೆ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ವಿವೇಕಾನಂದ ಸೇವಾಶ್ರಮ ಬೆಂಗಳೂರು ಮತ್ತು ಸಹನ ಕಣ್ಣಿನ ಆಸ್ಪತ್ರೆ ಕಾರಟಗಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ೪ನೇ ವರ್ಷದ ಬೃಹತ್ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಣ್ಣಿನ ಬಗ್ಗೆ ಎಲ್ಲರೂ ಹೆಚ್ಚಿನ ಮುತುವರ್ಜಿ ವಹಿಸಬೇಕು. ನಗರ ಪ್ರದೇಶದ ಜನರಿಗೆ ಸಿಗುವ ಗುಣಮಟ್ಟದ ಚಿಕಿತ್ಸೆ ಗ್ರಾಮೀಣ ಜನರಿಗೆ ದೊರೆಯದ ಕಾರಣ ಇಂತಹ ಶಿಬಿರಗಳ ಪ್ರಯೋಜನ ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಉದ್ದಿಮೆದಾರರು, ಸೇವಾ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಸಮುದಾಯದ ಉನ್ನತಿಗೆ ಶ್ರಮಿಸಬೇಕು ಎಂದರು.

ಬೆಂಗಳೂರಿನ ವಿವೇಕಾನಂದ ಸೇವಾಶ್ರಮದ ಡಾ.ಚೇತನ ಮಾತನಾಡಿ, ವಿವೇಕಾನಂದ ಸೇವಾಶ್ರಮ ಕಳೆದ ಹಲವು ದಶಕಗಳಿಂದ ನೇತ್ರ ಶಸ್ತ್ರ, ಚಿಕಿತ್ಸೆಯ ಸೇವೆ ಸಲ್ಲಿಸುತ್ತಲಿದೆ.ರಾಜ್ಯಾದ್ಯಂತ ಅನೇಕ ಶಿಬಿರ ನಡೆಸಿ ಬಹಳಷ್ಟು ಜನರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ನೇತ್ರಶಸ್ತ್ರ ಮಾಡಿಸಿಕೊಂಡವರು ವೈದ್ಯರು ಹೇಳಿದ ಎಲ್ಲ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಔಷದೋಪಚಾರ ಅಗತ್ಯವಾಗಿ ಪಡೆದುಕೊಳ್ಳಬೇಕು. ಅಗತ್ಯವಿದರೆ ಮಾತ್ರ ಕನ್ನಡಕ ಕೂಡ ಕೊಳ್ಳಬಹುದು. ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮ ಅಂಗವಾಗಿದ್ದು,ಶಸ್ತ್ರ ಚಿಕಿತ್ಸೆ ಆದ ಬಳಿಕ ಕಣ್ಣಿನ ರಕ್ಷಣೆ ಬಹಳ ಎಚ್ಚರಿಕೆಯಿಂದ ಮಾಡಿಕೊಳ್ಳಬೇಕು ಎಂದರು.

ಆಯೋಜಕರು ಆಸರೆ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಚನ್ನಬಸಪ್ಪ ಸುಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಆನಂದ ಮೇಗಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೆಗೌಡ ಮಾ. ಪಾಟೀಲ್, ಶರಣಯ್ಯಸ್ವಾಮಿ ಯರಡೊಣಾ, ಗ್ಯಾರಂಟಿ ಅನುಷಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ಸಮುದಾಯ ಆರೋಗ್ಯ ಕೇಂದ್ರದ ಡಾ. ಪ್ರಿಯಾಂಕ ಪಟ್ಟಣಶೆಟ್ಟಿ, ಡಾ. ವೀರಭದ್ರಗೌಡ, ಡಾ. ನಾಗರಾಜ, ಡಾ.ರಾಮಣ್ಣ, ಫಾರ್ಮಾಸಿಷ್ಟ್ ರಮೇಶ ಇಲ್ಲೂರ, ವರ್ತಕ ಪ್ರಲ್ಹಾದರಾವ್ ದೇಸಾಯಿ, ಶಿವರಾಜ ಈಳಿಗನೂರ, ತುಳಜಾರಾಮ ಸಿಂಘ್ರೀ, ಬಸವಲಿಂಗಪ್ಪ ನಾಡಗೌಡ, ಶರಣಪ್ಪ ಮೇಟಿ ಸೇರಿದಂತೆ ಆರೋಗ್ಯ ರಕ್ಷಾ ಸಮಿತಿ ಸರ್ವ ಸದಸ್ಯರು, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.