ಪ್ರಜಾಪ್ರಭುತ್ವ ಉಳಿಕೆಗೆ ಎಚ್ಚರಿಕೆಯ ಹೆಜ್ಜೆ ಇಡಿ: ಆಂಜನೇಯ

| Published : Apr 15 2024, 01:19 AM IST

ಪ್ರಜಾಪ್ರಭುತ್ವ ಉಳಿಕೆಗೆ ಎಚ್ಚರಿಕೆಯ ಹೆಜ್ಜೆ ಇಡಿ: ಆಂಜನೇಯ
Share this Article
  • FB
  • TW
  • Linkdin
  • Email

ಸಾರಾಂಶ

ಅಪಾಯದಲ್ಲಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಜೆಗಳು ಎಚ್ಚರಿಕೆ ಹೆಜ್ಜೆ ಇಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಚಿತ್ರದುರ್ಗ: ಅಪಾಯದಲ್ಲಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಜೆಗಳು ಎಚ್ಚರಿಕೆ ಹೆಜ್ಜೆ ಇಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಸೀಬಾರದಲ್ಲಿರುವ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮದಲ್ಲಿ

ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ. ಈಗಾಗಲೇ ಸಂವಿಧಾನ ಆಶಯಗಳಿಗೆ ದೊಡ್ಡಪೆಟ್ಟು ಕೊಟ್ಟಿದೆ. ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಗೆ ಹೆಚ್ಚು ಮನ್ನಣೆ ನೀಡಿದ್ದು, ಅಸಹಾಯಕ ಜನರನ್ನು ತಳಪಾಯಕ್ಕೆ ತಳ್ಳುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.ಯಾವುದನ್ನು ಸಹ ಪ್ರಶ್ನೆ ಮಾಡುವಂತಿಲ್ಲ. ಸರ್ವಾಧಿಕಾರಿ ಧೋರಣೆ ಉತ್ತುಂಗದಲ್ಲಿದೆ. ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ಮತದಾರರ ಮೇಲಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ದೇಶದ ಎಲ್ಲ ಜನರಿಗೆ ಸಮಾನ ನ್ಯಾಯ ಮತ್ತು ಹಕ್ಕು ನೀಡಲು ಒತ್ತು ಕೊಟ್ಟಿದ್ದರು. ಪ್ರಮುಖವಾಗಿ ಮಹಿಳೆಯರಿಗಾಗಿ ಲೋಕಸಭೆಯಲ್ಲಿ ಹಿಂದೂ ಕೋಡ್ ಬಿಲ್ಲನ್ನು ಮಂಡಿಸಿದರು. ಅಂದು ಅಂದಿನ ಮನುವಾದಿಗಳನ್ನು ತಿರಸ್ಕರಿಸಿದರು. ಇದರಿಂದ ಮಹಿಳೆಯರಿಗಾಗಿ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ಮನನೊಂದು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದು ಹೋರಾಟ ನಡೆಸಿದರು. ಸತಿ ಸಹಗಮನ ಪದ್ಧತಿ, ಮಹಿಳೆಯರ ಶೋಷಣೆ, ಶಿಕ್ಷಣದಿಂದ ಹೆಣ್ಣನ್ನು ದೂರ ಇಡುವುದು ಮನುವಾದಿಗಳ ಗುರಿಯಾಗಿದೆ. ಇವೆಲ್ಲವುಗಳ ವಿರುದ್ಧ ಹೋರಾಡಿದ ಅಂಬೇಡ್ಕರ್ ಆಶಯಗಳನ್ನು ಜನರು ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಆರ್.ನರಸಿಂಹರಾಜು, ಚಿತ್ರದುರ್ಗ ಎಸ್‌ಸಿ ವಿಭಾಗದ ಬ್ಲಾಕ್ ಅಧ್ಯಕ್ಷ ಅನಿಲ್ ಕೋಟಿ, ಎಲ್‌ಐಸಿ ಈರಣ್ಣಯ್ಯ, ಮುಖಂಡರಾದ ಜಾಲಿಕಟ್ಟೆ ತಿಪ್ಪೇಸ್ವಾಮಿ, ಬೋರನಹಳ್ಳಿ ಚೇತನ್, ತೇಕಲವಟ್ಟಿ ನಾಗರಾಜ್ ಉಪಸ್ಥಿತರಿದ್ದರು.