ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರಸಮಾಜದ ಮುಖ್ಯವಾಹಿನಿಗೆ ಬರಲು ಪ್ರತಿಯೊಬ್ಬರ ಹೆಣ್ಣು ಮಕ್ಕಳು ಸಾಧಕ ಮಹಿಳೆಯರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಮುನ್ನಡೆಯಬೇಕು ಎಂದು ವಿಶ್ವ ಆರ್ಥಿಕ ವೇದಿಕೆ ಭಾರತ ಪ್ರತಿನಿಧಿ, ನವೋಧ್ಯಮ ಶೀಲತೆ ಸಲಹಾ ಸಂಸ್ಥೆ ಸಂಸ್ಥಾಪಕಿ ಗಾಯಿತ್ರಿ ಕುಪೇಂದ್ರರೆಡ್ಡಿ ಹೇಳಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ವಿಭಾಗದ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ಸಂಘ ಮತ್ತು ಕ್ರೀಡಾ ಹವ್ಯಾಸಿ ಸಂಘಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಈ ಹಿಂದೆ ಹೆಣ್ಣು ಮಕ್ಕಳು ಮದುವೆ, ಮಕ್ಕಳು, ಕುಟುಂಬ ಎಂಬ ನಾಲ್ಕು ಗೋಡೆಗೆ ಸೀಮಿತವಾಗಿದ್ದರು. ಆದರೆ, ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಈ ದೇಶದ ರಾಷ್ಟ್ರಪತಿ ಹುದ್ದೆಯಿಂದ ಹಿಡಿದು ಹಲವು ಉನ್ನತ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ. ಅಂತಹ ಸಾಧಕ ಹೆಣ್ಣುಮಕ್ಕಳ ಸಾಧನೆಗಳನ್ನು ಪ್ರೇರೇಪಣೆಯಾಗಿ ತೆಗೆದುಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದರು.
ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲೂ ಮಹತ್ತರ ಸಾಧನೆ ಮಾಡಿದ್ದಾರೆ. ಅದರಂತೆ ಪ್ರತಿಯೊಬ್ಬ ಹೆಣ್ಣುಮಕ್ಕಳು ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಳ್ಳಬೇಕು. ಪರಿಶ್ರಮ, ಹಠ, ಛಲದಿಂದ ಮುನ್ನಡೆದರೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.ಮಾಜಿ ಸಚಿವ, ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಅವರು ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಗತಿ, ಉದ್ಯೋಗ ಸೃಷ್ಢಿ ಮಾಡಲು ಹಲವು ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಸರಕಾರಗಳು ಹಾಗೂ ಖಾಸಗಿ ಸಂಸ್ಥೆಗಳು ಸಹ ಅವಕಾಶಗಳನ್ನು ಒದಗಿಸಿಕೊಡುತ್ತಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳುವ ಕೆಲಸ ಮಾಡಬೇಕು ಎಂದರು.
ಚಿಕ್ಕವಯಸ್ಸಿನಲ್ಲೇ ಸಮಾಜಸೇವೆ ಮಾದರಿ:ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಶೈಕ್ಷಣಿಕ ಪ್ರಗತಿಗಾಗಿ ಬಾಲಕಿಯರ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆರಂಭಿಸಿ, ಅಗತ್ಯ ಕೊಠಡಿಗಳು, ಲ್ಯಾಬ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಬೇಕೆನ್ನುವುದು ಹಿರಿಯ ಆಸೆಯಾಗಿತ್ತು ಎಂದರು.
ಗಾಯಿತ್ರಿ ಕುಪೇಂದ್ರರೆಡ್ಡಿ ಅವರು ಚಿಕ್ಕವಯಸ್ಸಿನಲ್ಲಿಯೇ ಸಮಾಜ ಸೇವೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ದಾವೋಸ್ ನಲ್ಲಿ ನಡೆದ ವಿಶ್ವಆರ್ಥಿಕ ವೇದಿಕೆಗೆ ಭಾರತ ಪ್ರತಿನಿಧಿಯಾಗಿ ಭಾಗವಹಿಸುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು.ಸಂಸ್ಥೆ ಮೂಲಕ ರಾಜ್ಯದ ಹಲವು ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಇಂತಹ ಹೆಣ್ಣು ಮಕ್ಕಳು ದೇಶಕ್ಕೆ ಮಾದರಿಯಾಗಿದ್ದಾರೆ. ಇಂತಹ ಸಾಧಕಿಯರನ್ನು ವಿದ್ಯಾರ್ಥಿಗಳು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.
ಪ್ರೊ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ಹೈಟೆಕ್ ಶಾಲೆಗಳಲ್ಲಿಯೇ ಚಿನ್ನದ ಬಹುಮಾನ ನೀಡುವುದಿಲ್ಲ. ಆದರೆ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಅಧಿಕ ಅಂಕಗಳಿಸಿ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 10 ಗ್ರಾಂ ಚಿನ್ನದ ಸರವನ್ನು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಶಾಲೆಗೆ ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳು ಬರುವುದರಿಂದ ಅಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲಾ ಅನುಕೂಲ ಮಾಡಿಕೊಟ್ಟಿದ್ದಾರೆ. ಇಂತಹ ಅಧ್ಯಕ್ಷರನ್ನು ಪಡೆದ ವಿದ್ಯಾರ್ಥಿಗಳೇ ಪುಣ್ಯವಂತರು ಎಂದು ಬಣ್ಣಿಸಿದರು.
ಇದೇ ವೇಳೆ ಅತಿಹೆಚ್ಚು ಅಂಕಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೋನಿಕ, ಪಿಯುಸಿ - ಪ್ರಕೃತಿಗೆ ತಲಾ 10 ಗ್ರಾಂ ಚಿನ್ನದ ಸರವನ್ನು ನೀಡಿ ಗೌರವಿಸಲಾಯಿತು. ಶಾಲಾ-ಕಾಲೇಜು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಸಮಾರಂಭದಲ್ಲಿ ಸಂಸ್ಥೆ ಕಾರ್ಯದರ್ಶಿ ಕೆ.ವೈರಮುಡಿಗೌಡ, ಉಪಾಧ್ಯಕ್ಷ ಟಿ.ರಾಮಕೃಷ್ಣೇಗೌಡ, ನಿರ್ದೇಶಕರಾದ ಮುರುಳಿ, ಎಸ್.ನಾರಾಯಣಗೌಡ, ಶಿವಣ್ಣ, ಹಾರೋಹಳ್ಳಿ ನಾರಾಯಣಗೌಡ, ಪ್ರಸನ್ನ, ಶ್ರಿಕಾಂತ್, ಸತೀಶ್ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.