ದಾವಣಗೆರೆ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಪದೇಪದೇ ದುರಸ್ಥಿತಿಗೊಳಗಾಗುತ್ತಿದ್ದು, ಕಳಪೆ ಗುಣಮಟ್ಟದ ಪರಿಕರಗಳನ್ನು ಅಳವಡಿಸಿರುವುದೇ ಇದಕ್ಕೆಲ್ಲಾ ಕಾರಣ‍ವಾಗಿದೆ. ಇಂತಹ ಪರಿಕರಗಳ ಗುಣಮಟ್ಟದ ಬಗ್ಗೆ ಲ್ಯಾಬ್‌ನಲ್ಲಿ ಪರೀಕ್ಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚಿಸಿದ್ದಾರೆ.

- ಹಾಸ್ಟೆಲ್ ಮಕ್ಕಳಿಗೆ ಪ್ರವೇಶ, ಊಟ, ವಸತಿಗೆ ತೊಂದರೆ ಆಗದಿರಲಿ: ಸಚಿವ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಪದೇಪದೇ ದುರಸ್ಥಿತಿಗೊಳಗಾಗುತ್ತಿದ್ದು, ಕಳಪೆ ಗುಣಮಟ್ಟದ ಪರಿಕರಗಳನ್ನು ಅಳವಡಿಸಿರುವುದೇ ಇದಕ್ಕೆಲ್ಲಾ ಕಾರಣ‍ವಾಗಿದೆ. ಇಂತಹ ಪರಿಕರಗಳ ಗುಣಮಟ್ಟದ ಬಗ್ಗೆ ಲ್ಯಾಬ್‌ನಲ್ಲಿ ಪರೀಕ್ಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 791 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಅನೇಕ ಕಡೆ ಖಾಸಗಿಯವರಿಗೆ ನಿರ್ವಹಣೆಗಾಗಿ ಗುತ್ತಿಗೆಗೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ದೂರು ಮರುಕಳಿಸಬಾರದು ಎಂದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಶುದ್ಧ ನೀರಿನ ಘಟಕಗಳು ಪದೇಪದೇ ಹಾಳಾಗುತ್ತಿವೆ. ಹೀಗೆ ದುರಸ್ತಿಗೆ ಬಂದಾಗ ಕಳಪೆ ಪರಿಕರ ಅ‍ಳವಡಿಸಿದ್ದರಿಂದಲೇ ಪದೇಪದೇ ಹಾಳಾಗಿ, ಜನರಿಗೆ ತೊಂದರೆ ಆಗುತ್ತಿದೆ ಎಂದರು. ಆಗ ಸಚಿವ ಎಸ್ಸೆಸ್ಸೆಂ, ಚನ್ನಗಿರಿ ತಾಲೂಕಿನಲ್ಲಿ ಉತ್ತಮವಾಗಿದ್ದು, ಅದಕ್ಕಾಗಿ ಈಗ ನಿರ್ವಹಿಸುತ್ತಿರುವ ಏಜೆನ್ಸಿ ಅಳವಡಿಸಿದ ಪರಿಕರಿಗಳ ಬಗ್ಗೆ ಲ್ಯಾಬ್‌ನಲ್ಲಿ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಬಸವಂತಪ್ಪ ಮಾತನಾಡಿ, ಬಸವಾಪಟ್ಟಣದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಊಟಕ್ಕೆ ಗುತ್ತಿಗೆಗಾರರು ಬಸ್‌ನಲ್ಲಿ ಅಡುಗೆ ಸಾಮಗ್ರಿ ಕಳಿಸಿದರೆ ಮಾತ್ರವೇ ಊಟ, ಇಲ್ಲವೆಂದರೆ ಇಲ್ಲ ಎಂಬ ಸ್ಥಿತಿ ಇದೆ. ಮಕ್ಕಳು ಸಾಮಾನು ಹೊತ್ತು ತರುವ ಬಸ್‌ಗಾಗಿ ಕಾಯುತ್ತಿರುತ್ತಾರೆ. ವಾರ್ಡನ್ ಸ್ಥಳೀಯ ಅಂಗಡಿಯಿಂದಲೇ ಸಾಮಗ್ರಿ ಖರೀದಿಸಿ, ಹಾಸ್ಟೆಲ್ ನಡೆಸುತ್ತಾರೆ. ಆದರೆ, ಆಹಾರ ಪೂರೈಕೆ ಟೆಂಡರ್ ಕರೆದಿದ್ದರೂ ಎಲ್ಲೋ ಕುಳಿತು, ಕಾಗದಪತ್ರ ವ್ಯವಹಾರ ಮಾಜುತ್ತಾರೆ. ಇದು ಎಲ್ಲ ಹಾಸ್ಟೆಲ್‌ನಲ್ಲೂ ಆಗುತ್ತಿದೆ. ಜಿಲ್ಲಾಮಟ್ಟದಲ್ಲೇ ಟೆಂಡರ್‌ ಕರೆದು, ಟೆಂಡರದಾರರೇ ಸಾಮಗ್ರಿ ಪೂರೈಸುವಂತಾಗಬೇಕು ಎಂದರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮಾತನಾಡಿ, ಹಾಸ್ಟೆಲ್ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಅನೇಕ ಶಿಫಾರಸಿನೊಂದಿಗೆ ಆಗಮಿಸುತ್ತಿದ್ದು, ಯಾವುದೇ ಅರ್ಹ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶದಿಂದ ವಂಚಿತವಾಗದಂತೆ ಬಿಸಿಎಂ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಶೂನ್ಯಕ್ಕೆ ತಗ್ಗಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿ. ನಿಮ್ಮ ನಿರ್ಲಕ್ಷ್ಯವಾದಾಗ ತಾಯಿ, ಮಗುವಿನ ಮರಣ ಪ್ರಕರಣ ನಡೆಯುತ್ತವೆ. ಯಾವುದೇ ಕಾರಣಕ್ಕೂ ತಾಯಿ, ಮಗು ಸಾವಿನ ಪ್ರಕರಣಗಳು ಆಗಬಾರದು ಎಂದು ಹೇಳಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಜಗಳೂರಿನಲ್ಲಿ ಏಕಲವ್ಯ ಶಾಲೆ ಆರಂಭಿಸಲು ಪ್ರಸ್ತಾಪನೆ ಸಲ್ಲಿಸಲಾಗಿತ್ತು. ಆದರ ಸ್ಥಿತಿಗತಿ ಬಗ್ಗೆ ಪರಿಶಿಷ್ಟ ಪಂಗಡದ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದರು. ಆಗ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ, ಇದರಿಂದ ಉತ್ತಮ ಶಾಲಾ ಸೌಕರಾಯ ಸಿಗಲಿದೆ. ಸಂಬಂಧಿಸಿದ ಇಲಾಖೆ ಸಚಿವರೊಂದಿಗೂ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

- - -

(ಕೋಟ್ಸ್‌) ವಾಣಿಜ್ಯ ತೆರಿಗೆ ಇಲಾಖೆಯಿಂದ ವಾರ್ಷಿಕವಾಗಿ ₹372 ಕೋಟಿ ತೆರಿಗೆ ಸಂಗ್ರಹ ಗುರಿಗೆ ಈಗಾಗಲೇ ₹344 ಕೋಟಿ ಸಂಗ್ರಹವಾಗಿದೆ. ಆದರೆ, ಸಣ್ಣ ಸಣ್ಣ ಸ್ಥಳೀಯ ಅಡಕೆ ವ್ಯಾಪಾರಿಗಳ ವಾಹನಗಳನ್ನು ತಡೆದು ತೆರಿಗೆ, ತಂಡ ಹಾಕುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ದಂಡ ಹಾಕಬೇಡಿ.

- ಬಸವರಾಜ ವಿ. ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.

- - - ದಾವಣಗೆರೆ ಜಿಲ್ಲೆಯಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ಹಾಸ್ಟೆಲ್‍ಗಳನ್ನು ಯಾವುದೇ ಕಾರಣಕ್ಕೂ ನಗರ ಪ್ರದೇಶಗಳಿಗೆ ಸ್ಥಳಾಂತರಿಸಬಾರದು. ಇದರಿಂದ ಅಲ್ಲಿನ ಶಾಲೆ, ಕಾಲೇಜುಗಳಿಗೆ ತೊಂದರೆಯಾಗಲಿದೆ. ಈ ಬಗ್ಗೆ ಸಚಿವರು, ಜಿಲ್ಲಾಧಿಕಾರಿ, ಜಿಪಂ ಸಿಇಓ ಗಮನ ಹರಿಸಬೇಕು.

- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ.

- - - ಬೀದಿ ನಾಯಿಗಳನ್ನು ಇನ್ನೊಂದು ವಾರದಲ್ಲಿ ಹಿಡಿದು ಪ್ರತ್ಯೇಕವಾಗಿ ಸಾಕಾಣಿಕೆ ಮಾಡಲು ₹80 ಲಕ್ಷ ನೀಡಿದ್ದು, ಅವುಗಳನ್ನು ಸೆರೆಹಿಡಿಯಲು ಕ್ರಮ ವಹಿಸಲಾಗುತ್ತದೆ.

- ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.

- - -

(ಟಾಪ್ ಕೋಟ್‌) ದಾವಣಗೆರೆ ಜಿಲ್ಲಾಸ್ಪತ್ರೆ, ಬಳಿ ಬೀದಿನಾಯಿಗಳು ಮತ್ತು ಹಂದಿಗಳು ಹೆಚ್ಚಾಗಿವೆ. ದಾವಣಗೆರೆಯ ವಿದ್ಯಾರ್ಥಿ ಭವನದಿಂದ ಚನ್ನಗಿರಿ ರಸ್ತೆಯ ಉದ್ದಕ್ಕೂ, ನಗರದ ವಿವಿಧೆಡೆ ಮಾಂಸದ ಅಂಗಡಿಗಳು, ಹೋಟೆಲ್‌ಗಳ ಬಳಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗಿದೆ. ನಾಯಿಗಳು, ಹಂದಿಗಳ ಹಾವ‍ಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. - ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ, ದಾವಣಗೆರೆ ಕ್ಷೇತ್ರ.

- - -