ಸಾರಾಂಶ
ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಕೂಡಲೇ ಬಂಧಿಸಿ, ಗೂಂಡಾ ಕಾಯ್ದೆಯಡಿ ಗಡಿಪಾರಿಗೆ ಕ್ರಮ ವಹಿಸಬೇಕು. ಕೊಲೆಗೆ ಪರೋಕ್ಷವಾಗಿ ಪ್ರೇರೇಪಿಸಿದವರನ್ನು ಪತ್ತೆ ಮಾಡಿ, ತನಿಖೆ ನಡೆಸಬೇಕು.
ಬಳ್ಳಾರಿ: ನಗರದ ವಡ್ಡರಬಂಡೆ ಪ್ರದೇಶದಲ್ಲಿ ಡಿ. 31ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನು ಬಂಧಿಸಬೇಕು. ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘದಿಂದ ನಗರದಲ್ಲಿ ಪ್ರತಿಭಟನೆ ಜರುಗಿತು.
ಹೊಸವರ್ಷ ಆಚರಣೆಗೆ ಕೇಕ್ ತರಲು ತೆರಳಿದ್ದ ಸೈದುಲ್ಲಾ ಹಾಗೂ ರಜಾಕ್ ವಲಿ ಮೇಲೆ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ದಾಳಿಯಿಂದ ಸೈದುಲ್ಲಾ ಮೃತಪಟ್ಟಿದ್ದು, ರಜಾಕ್ ವಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರು ಹಾಗೂ ವೃತ್ತಿನಿರತ ಕೊಲೆಗಡುಕರು ಎಂದು ಹೇಳಲಾಗುತ್ತಿದೆ. ಇಂತಹ ದುಷ್ಕರ್ಮಿಗಳಿಂದ ಸಮಾಜದ ಶಾಂತಿಗೆ ಭಂಗವಾಗಲಿದೆ. ಹೀಗಾಗಿ ಕೊಲೆಗೈದ ದುಷ್ಕರ್ಮಿಗಳ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಕೂಡಲೇ ಬಂಧಿಸಿ, ಗೂಂಡಾ ಕಾಯ್ದೆಯಡಿ ಗಡಿಪಾರಿಗೆ ಕ್ರಮ ವಹಿಸಬೇಕು. ಕೊಲೆಗೆ ಪರೋಕ್ಷವಾಗಿ ಪ್ರೇರೇಪಿಸಿದವರನ್ನು ಪತ್ತೆ ಮಾಡಿ, ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಘಟನೆಯಲ್ಲಿ ಕೊಲೆಗೀಡಾಗಿರುವ ಸೈದುಲ್ಲಾ ಹಾಗೂ ರಜಾಕ್ ವಲಿ ಕುಟುಂಬವು ಅತ್ಯಂತ ಬಡತನ ಹಿನ್ನೆಲೆಯ ಕುಟುಂಬವಾಗಿದೆ. ಹತ್ಯೆಯಾದ ಸೈದುಲ್ಲಾ ಹಮಾಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಮಗನ ಸಾವಿನಿಂದ ಪೋಷಕರು ಬೀದಿಗೆ ಬಂದಿದ್ದಾರೆ. ಪೋಷಕರ ಮುಂದಿನ ಜೀವನ ನಿರ್ವಹಣೆಗೆ ಪರಿಹಾರ ನೀಡಬೇಕು. ಅಮಾಯಕರು ಹಾಗೂ ದುರ್ಬಲ ವರ್ಗದ ಜನರ ಮೇಲೆ ದಾಳಿ, ದಬ್ಬಾಳಿಕೆಗಳು ನಡೆಯುವುದನ್ನು ತಪ್ಪಿಸಬೇಕು. ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಲು ಹಾಗೂ ಇಂತಹ ಘಟನೆಗಳು ನಗರದಲ್ಲಿ ನಡೆಯದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಾಸಾಬ್, ಉಪಾಧ್ಯಕ್ಷ ಶೇಖ್ ಸಾಬ್, ಪ್ರಧಾನ ಕಾರ್ಯದರ್ಶಿ ಅಲ್ಲಾಬಕಾಷ್, ಮೌಲಾಲಿ ಸೇರಿದಂತೆ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತಕ್ಕೆ ಸಂಘದ ಪ್ರಮುಖರು ಮನವಿ ಸಲ್ಲಿಸಿದರು.