ರೋಣ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ತಿಳಿಸಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆಗಳ ಲಾಭ ಪಡೆಯುತ್ತಿರುವ ಅನರ್ಹರು ಹಾಗೂ ಮೃತಪಟ್ಟ ಫಲಾನುಭವಿಗಳ ಕುರಿತು ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ವಹಿಸಬೇಕು ಎಂದರು.

ಮನೆಮನೆಗೆ ಭೇಟಿ ನೀಡಿ ನಡೆಸಿದ ಪರಿಶೀಲನೆಯಲ್ಲಿ 945 ಫಲಾನುಭವಿಗಳು ಮೃತಪಟ್ಟಿರುವುದು ಹಾಗೂ 248 ಮಂದಿ ಜಿಎಸ್‌ಟಿಗೆ ನೋಂದಣಿಯಾಗಿರುವುದು ಪತ್ತೆಯಾಗಿದೆ. ಮನೆಯ ಯಜಮಾನಿ ಮೃತಪಟ್ಟಿದ್ದರೆ ರೇಷನ್ ಕಾರ್ಡ್‌ನಲ್ಲಿ ಅಗತ್ಯ ತಿದ್ದುಪಡಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಗೃಹಲಕ್ಷ್ಮೀ ಯೋಜನೆಯ ಕಂತು ಜಮೆಯಾಗುವ ಮುನ್ನವೇ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಬೇಕು ಹಾಗೂ ಅರ್ಹರು ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಪ್ರತಿ ತಿಂಗಳು 25ರ ನಂತರ ಪಡಿತರ ವಿತರಣೆ ಆರಂಭವಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಮಿತಿ ಸದಸ್ಯ ಬಿ.ಎಸ್. ರಡ್ಡೇರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಗೋದಾಮಿನಿಂದ ಪಡಿತರ ಎತ್ತುವಳಿ ತಡವಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಎತ್ತುವಳಿ ಮಾಡಿದ ಮರುದಿನವೇ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಆರಂಭಿಸಲಾಗುತ್ತಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲಾಗುತ್ತಿದ್ದು, ಅಂತ್ಯೋದಯ ಕಾರ್ಡ್‌ದಾರರಿಗೆ 42 ಕೆಜಿ ಜೋಳ ಹಾಗೂ 28 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ಹಾಗೂ 3 ಕೆಜಿ ಜೋಳ ನೀಡಲಾಗುತ್ತಿದೆ ಎಂದರು.

ಗೃಹಜ್ಯೋತಿ ಯೋಜನೆ:


ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಫಲಾನುಭವಿಗಳ ಮರು ಸಮೀಕ್ಷೆ ಶೇ. 86ರಷ್ಟು ಪೂರ್ಣಗೊಂಡಿದೆ. ಉಳಿದ ಫಲಾನುಭವಿಗಳ ಸಮೀಕ್ಷೆಯನ್ನು ಮನೆಮನೆಗೆ ತೆರಳಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸದಸ್ಯರು ಸೂಚಿಸಿದರು. ಯೋಜನೆಯಿಂದ ಹೆಸರು ಹೊರಗುಳಿಯದಂತೆ ಮತದಾರರ ಗುರುತಿನ ಚೀಟಿ, ಆಧಾರ್ ಹಾಗೂ ರೇಷನ್ ಕಾರ್ಡ್ ದಾಖಲೆಗಳ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಿದ್ಯುತ್ ಸಲಹಾ ಸಮಿತಿ ಸಭೆಗಳ ಮಾಹಿತಿ ಸದಸ್ಯರಿಗೆ ದೊರೆಯುತ್ತಿಲ್ಲ ಎಂದು ಶಿವಪ್ಪ ಗಾಣಿಗೇರ ಆಕ್ಷೇಪ ವ್ಯಕ್ತಪಡಿಸಿದರು. ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತರಲು ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.

ಕೆಎಸ್‌ಆರ್‌ಟಿಸಿ ಸೇವೆ ಕುರಿತು ಚರ್ಚೆ ನಡೆಸಿದಾಗ, ರೋಣ- ಅಬ್ಬಿಗೇರಿ ಮಾರ್ಗದಲ್ಲಿ ಬೆಳಗ್ಗೆ 6ಕ್ಕೆ ಹಾಗೂ ಸಂಜೆ 5.30ಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು. ರೋಣ- ಸವಡಿ ಮಾರ್ಗವಾಗಿ ಗದಗಕ್ಕೆ ತೆರಳುವ ಬಸ್‌ಗಳಲ್ಲಿ ಹೆಚ್ಚಿನ ಜನದಟ್ಟಣೆ ಇರುವುದರಿಂದ ಹೆಚ್ಚುವರಿ ಬಸ್ ಕಲ್ಪಿಸಬೇಕು ಎಂದು ಬಸವರಾಜ ತಳವಾರ ಮನವಿ ಮಾಡಿದರು.

ರೋಣ- ಹೊಸಳ್ಳಿ- ಇಟಗಿ ಮಾರ್ಗದ ಬಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಶಾಲಾ ಸಮಯದಲ್ಲಿ ನಿಗದಿತ ಸ್ಥಳಗಳಲ್ಲಿ ಬಸ್ ನಿಲ್ಲಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬಿ.ಎಸ್. ರಡ್ಡೇರ ಹೇಳಿದರು. ಇಟಗಿ ಮಾರ್ಗದ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಅಗತ್ಯ ಸೂಚನೆ ನೀಡುವಂತೆ ಮಿಥುನ್ ಜಿ. ಪಾಟೀಲ ತಿಳಿಸಿದರು.

ಸಭೆಯಲ್ಲಿ ತಾಪಂ ಇಒ ಚಂದ್ರಶೇಖರ ಕಂದಕೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಇದ್ದರು.