ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಿ

| Published : Jul 10 2024, 12:36 AM IST

ಸಾರಾಂಶ

ದಿನೇ ದಿನೇ ಹೆಚ್ಚುತ್ತಿರುವ ಡೆಂಘೀ ಜ್ವರ, ರೋಗ ತಡೆಗಟ್ಟಲು ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳಬೇಕು

ಶಿರಹಟ್ಟಿ: ರಾಜ್ಯಾದ್ಯಂತ ಜನರಲ್ಲಿ ಆತಂಕ ಮೂಡಿಸಿರುವ ಡೆಂಘೀ ಕಾಯಿಲೆ ಹರಡದಂತೆ ಆರೋಗ್ಯ ಇಲಾಖೆ, ಪಪಂ, ಶಿಕ್ಷಣ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಸಾರಿಗೆ ಸೇರಿದಂತೆ ಇತರ ಎಲ್ಲ ಇಲಾಖೆ ಅಧಿಕಾರಿಗಳು ಕಾಯಿಲೆ ತೀವ್ರತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ತಹಸೀಲ್ದಾರ್‌ ಅನಿಲ ಕೆ. ಬಡಿಗೇರ ಸೂಚನೆ ನೀಡಿದರು.ತಾಲೂಕಾಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪಪಂ ಶಿರಹಟ್ಟಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಮುಂಜಾಗ್ರತಾ, ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಿನೇ ದಿನೇ ಹೆಚ್ಚುತ್ತಿರುವ ಡೆಂಘೀ ಜ್ವರ, ರೋಗ ತಡೆಗಟ್ಟಲು ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಮನೆ ಮನೆಗಳಿಗೆ ಖುದ್ದು ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ರೋಗ ನಿಯಂತ್ರಣ ಹಾಗೂ ಜಾಗೃತಿ ಮತ್ತು ಮುನ್ನೆಚ್ಚರಿಕೆ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಮಾರಣಾಂತಿಕ ಡೆಂಘೀ ಕಾಯಿಲೆ ವೇಗದಲ್ಲಿ ಹರಡುತ್ತಿದೆ. ಕಟ್ಟುನಿಟ್ಟಾಗಿ ರೋಗ ನಿಯಂತ್ರಣಕ್ಕೆ ಮುಂದಾಗಬೇಕು. ಡೆಂಘೀ ಕಾಯಿಲೆ ಕಡೆಗಣಿಸುವಷ್ಟು ಸಣ್ಣ ಕಾಯಿಲೆಯಲ್ಲ. ಜ್ವರ ಬಂದವರಲ್ಲಿ ಡೆಂಘೀ ಪತ್ತೆ ಖಚಿತಗೊಂಡಲ್ಲಿ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಶರವೇಗದಲ್ಲಿ ಕುಸಿತಗೊಳ್ಳುತ್ತವೆ. ಇದರಿಂದ ಮನುಷ್ಯನ ಜೀವಕ್ಕೆ ಕಂಟಕ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಇಲಾಖೆಗಳೊಂದಿಗೆ ಸಹಕರಿಸಬೇಕು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಬಾಧಿಸುವುದು ಸಾಮಾನ್ಯ. ಆದರೆ ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮಾನವನ ಮರಣ ಮೃದಂಗಕ್ಕೆ ಡೆಂಘೀ ವೈರಸ್ ಮುನ್ನುಡಿ ಬರೆಯುತ್ತದೆ. ಮಕ್ಕಳು, ಗರ್ಭಿಣಿಯರು ಎಚ್ಚರ ವಹಿಸಬೇಕು. ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ತೊಟ್ಟಿ, ಬ್ಯಾರಲ್, ಏರ್ ಕೂಲರ್‌ಗಳನ್ನು ಸಾಧ್ಯವಾದಷ್ಟು ವಾರದಲ್ಲಿ ಒಮ್ಮೆಯಾದರೂ ಖಾಲಿ ಮಾಡಿ ಒಣಗಿಸಿ ಭರ್ತಿ ಮಾಡಬೇಕು ಎಂದು ಹೇಳಿದರು.

ವಲಸೆ ಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು. ಅನುಪಯುಕ್ತ ವಸ್ತುಗಳಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು. ನೀರು ಸಂಗ್ರಹಿಸುವ ಪಾತ್ರೆ ಚೆನ್ನಾಗಿ ತೊಳೆದು ಅವುಗಳನ್ನು ಒಣಗಿಸಬೇಕು. ಮಾಹಿತಿ ಕರಪತ್ರಗಳ ಹಂಚಿಕೆ ಮಾಡಬೇಕು ಎಂದು ತಹಸೀಲ್ದಾರ ಸಲಹೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಮಾತನಾಡಿ, ನೀರು ಶೇಖರಣೆಯಾಗುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಲು ಕ್ರಮ ವಹಿಸಬೇಕು. ನಿರುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದರ ಜತೆಗೆ ಶೀಘ್ರ ಹಾಗೂ ಸೂಕ್ತ ವಿಲೇವಾರಿಗೆ ಕ್ರಮ ವಹಿಸಲು ತಿಳಿಸಿದರು.

ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆ ಬಳಸಿ ಸೊಳ್ಳೆ ಕಚ್ಚದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ದೇಹದಲ್ಲಿ ಏನಾದರೂ ಏರುಪೇರುಗಳಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಡೆಂಘೀ ಕಾಯಿಲೆ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ಎಲ್ಲ ಇಲಾಖೆ ಅಧಿಕಾರಿಗಳು ಸಹಕರಿಸಿ ಕಾಯಿಲೆ ಹೋಗಲಾಡಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಕೇವಲ ಆರೋಗ್ಯ ಇಲಾಖೆ ಮೇಲೆ ಅವಲಂಬನೆ ಆಗದೇ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಭಾವಿಸಿ ಕಾರ್ಯನಿರ್ವಹಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆಯ ಶರಣಯ್ಯ ಕುಲಕರ್ಣಿ, ಸಿಡಿಪಿಒ ಮೃತ್ತುಂಜಯ ಗುಡ್ಡದಾನವೇರಿ, ಮನುಮೇಶ ಕೊಂಡಿಕೊಪ್ಪ, ಬಿ.ಎಸ್. ಹಿರೇಮಠ, ಎಂ.ಜಿ. ಚೆನ್ನಮ್ಮನವರ, ಎಂ.ಆರ್. ಹುರಳಿಕೊಪ್ಪಿ, ಜಗದೀಶ ಕೋಡಿಹಳ್ಳಿ, ಗೀತಾ ಕಾಂಬ್ಳೆ, ಮಲ್ಲಿಕಾರ್ಜುನ ಮೇತ್ರ ಮತ್ತಿತರರು ಉಪಸ್ಥಿತರಿದ್ದರು.