ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ವರ್ಷಗಳ ಹಿಂದೆಯೇ ಗುತ್ತಿಗೆ ಅವಧಿ ಮುಗಿದಿದ್ದರೂ ಸುಪರ್ದಿಗೆ ಪಡೆಯದ ಸುಮಾರು 100 ಕೋಟಿ ರು. ಮೌಲ್ಯದ ಎರಡು ಸ್ವತ್ತುಗಳನ್ನು ತಕ್ಷಣ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವಶಕ್ಕೆ ಪಡೆಯುವಂತೆ ಜಿಬಿಎ ಮುಖ್ಯ ಆಯುಕ್ತರನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕಪೇಟೆಗೆ ಹೊಂದಿಕೊಂಡಿರುವ ಅಂಚೆ ಪೇಟೆಯ ರಜತಾ ಕಾಂಪ್ಲೆಕ್ಸ್‌ ಕಟ್ಟಡವು ಜಿಬಿಎ ಸ್ವತ್ತಾಗಿದೆ. ಇದು ಸುಮಾರು 20 ಸಾವಿರ ಚದರ ಅಡಿಗೂ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಈ ಸ್ವತ್ತಿನ ಕೆಳ ಮಹಡಿಯ ಗುತ್ತಿಗೆ ಅವಧಿ ಮುಗಿದು ಹಲವು ವರ್ಷ ಕಳೆದಿದೆ. ಈ ಸ್ವತ್ತಿನ ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಸರ್ಕಾರಿ ಪ್ರೌಢಶಾಲೆ ನಡೆಯುತ್ತಿದೆ. ನೆಲ ಅಂತಸ್ತಿನ ಮಳಿಗೆಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಶಿಥಿಲಾವಸ್ಥೆಗೆ ತಲುಪಿರುವ ಈ ಕಟ್ಟಡದಲ್ಲಿ ಹಲವರು ಕಾನೂನು ಬಾಹಿರವಾಗಿ ಮಳಿಗೆಗಳನ್ನು ನಡೆಸುತ್ತಿದ್ದಾರೆ. ಈ ಮಳಿಗೆಗಳನ್ನು ತಮ್ಮ ಹೆಸರಿಗೆ ಖಾತಾ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿಕ್ಕಪೇಟೆಗೆ ಹೊಂದಿಕೊಂಡಿರುವ ಮಾಮೂಲು ಪೇಟೆಯ ಮಹಾರಾಜ ಪ್ಲಾಜಾ ವಾಣಿಜ್ಯ ಕಟ್ಟಡವು ಜಿಬಿಎ ಸ್ವತ್ತಾಗಿದೆ. ಸಮಾರು 25 ಸಾವಿರ ಚದರ ಅಡಿಗೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಈ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದೆ. ನೆಲ ಅಂತಸ್ತಿನ ಮಳಿಗೆಗಳನ್ನು ಹಲವು ವ್ಯಕ್ತಿಗಳು ಅತಿಕ್ರಮಿಸಿದ್ದಾರೆ. ಈ ಮಳಿಗೆಗಳನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಮುಂದಾಗಿರುವ ಬಗ್ಗೆ ತಿಳಿದು ಬಂದಿದೆ.

ಜಿಬಿಎಗೆ ಸೇರಿದ ಈ ಎರಡೂ ಸ್ವತ್ತುಗಳ ಮಾರುಕಟ್ಟೆ ಮೌಲ್ಯದ ಸುಮಾರು 100 ಕೋಟಿ ರು.ಗೂ ಹೆಚ್ಚಿದೆ. ಗುತ್ತಿಗೆ ಅವಧಿ ಮುಗಿದಿದ್ದರೂ ಈ ಕಟ್ಟಡಗಳ ಮಳಿಗೆಗಳನ್ನು ಖಾಲಿ ಮಾಡದೆ ಕಬಳಿಸಲು ಯತ್ನಿಸುತ್ತಿರುವ ಈ ಅತಿಕ್ರಮಣಕಾರರನ್ನು ತಕ್ಷಣ ತೆರವುಗೊಳಿಸಬೇಕು. ಈ ಎರಡೂ ಸ್ವತ್ತುಗಳನ್ನು ಜಿಬಿಎ ವ್ಯಾಪ್ತಿಗೆ ತೆಗೆದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಅತಿಕ್ರಮಣಕಾರೊಂದಿಗೆ ಸಹಕರಿಸಿರುವ ಜಿಬಿಎ ಗಾಂಧಿನಗರ ವಿಭಾಗದ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.