ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಡೆಂಘೀ ಜ್ವರ ಬರದಂತೆ ಮುಂಜಾಗ್ರತೆ ವಹಿಸಲು ಮನೆ, ಶಾಲೆ, ದೇಗುಲಗಳ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಮೇಲುಕೋಟೆ ವೈದ್ಯಾಧಿಕಾರಿ ಡಾ. ವರ್ಷ ಕರೆ ನೀಡಿದರು.ಆರೋಗ್ಯ ಇಲಾಖೆ, ಗ್ರಾಮ ಪಂಚಾಯ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಹಾಗೂ ಮೈಸೂರು ರಾಯಲ್ ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೆಂಘೀ ಮತ್ತು ಮಲೇರಿಯಾ ರೋಗ ತಡೆ ಸಂಬಂಧ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 68 ಹಳ್ಳಿಗಳು ಸೇರಿದ್ದು, ಈವರೆಗೆ ಯಾವುದೇ ಡೆಂಘೀ ಪ್ರಕರಣ ವರದಿಯಾಗಿಲ್ಲ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳ ನಿರ್ಮೂಲನೆ ಮಾಡಬೇಕು ಎಂದರು.ನಿಂತ ಕಲೂಷಿತ ನೀರು ಸೊಳ್ಳೆಗಳ ವಾಸಸ್ಥಾನವಾಗಿದೆ. ಯಾವುದೇ ಸ್ಥಳದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ಗ್ರಾಪಂ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಶಿಕ್ಷಕರು ಸಹ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕಾದ್ದು ಅಗತ್ಯವಾಗಿದೆ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಕ ನಟರಾಜು ಮಾತನಾಡಿ, ಮೇಲುಕೋಟೆ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಲೇರಿಯಾ ಕಾಯಿಲೆಯ ಮೂರ್‍ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದವಾದರೂ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ. ಮಳೆಗಾಲದಲ್ಲಿ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಂಟೆಗಳು ಬೆಳೆಯದಂತೆ ನೋಡಿಕೊಳ್ಳಬೇಕು. ಶಾಲೆ, ಅಂಗನವಾಡಿ ಕೇಂದ್ರಗಳ ಬಳಿ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿ ಕಾಳಜಿ ವಹಿಸಬೇಕು.ಕಾಯಿಲೆ ಬಂದಾಗ ಚಿಕಿತ್ಸೆ ಪಡೆದುಕೊಳ್ಳಲು ಶ್ರಮಪಡುವುದರ ಬದಲು ಕಾಯಿಲೆ ಬರದಂತೆ ಎಚ್ಚರ ವಹಿಸುವುದು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.
ಗ್ರಾಪಂ ಪಿಡಿಒ ರಾಜೇಶ್ವರ್, ಸದಸ್ಯ ಜಯರಾಮೇಗೌಡ, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಎಂಐಐಟಿ ಕಾಲೇಜಿನ ಎನ್.ಎಸ್.ಎಸ್ ಶಿಭಿರಾಧಿಕಾರಿ ರವಿಕುಮಾರ್, ಸಿವಿಲ್ ಮುಖ್ಯಸ್ಥ ಪ್ರೊ.ಎನ್.ನಕುಲ್, ಟಿ.ಎನ್ .ಮುತ್ತುರಾಜ್ ಮತ್ತಿತರರು ಭಾಗವಹಿಸಿದ್ದರು.ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಹಾಗೂ ಮೈಸೂರು ರಾಯಲ್ ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಡೆಂಘೀ ಮತ್ತು ಮಲೇರಿಯಾ ರೋಗತಡೆಗೆ ಜಾಗೃತಿ ಮೂಡಿಸಿದರು.