ರಸ್ತೆ ಅಪಘಾತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ

| Published : May 30 2024, 12:51 AM IST

ಸಾರಾಂಶ

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಾಲಯಿಸಬೇಕು. ಹಾಗೂ ಹಿಂಬದಿ ಸವಾರರಿಗೂ ಸಹ ಹೆಲ್ಮೆಟ್ ಧರಿಸಬೇಕು

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲೆಯಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆ ಮತ್ತು ಗ್ರಾಮೀಣ ರಸ್ತೆಗಳ ಮೇಲೆ ಇರುವ ಕಪ್ಪು ಜಾಗಗಳನ್ನು (ಬ್ಲಾಕ್ ಸ್ಪಾಟ್) ಗುರುತಿಸಿ ಅಂತಹ ಸ್ಥಳಗಳಲ್ಲಿ ಸೈನ್ ಬೋರ್ಡ್‌ ಅಳವಡಿಸುವ ಮೂಲಕ ರಸ್ತೆಗಳಲ್ಲಿ ಅಪಘಾತ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ವಾಹನದ ಮೇಲೆ ಪುಟ್ಟ ಮಕ್ಕಳು (9 ತಿಂಗಳಿನಿಂದ 4ವರ್ಷಗಳ) ವರೆಗೆ ಇರುವವರನ್ನು ಕೂಡಿಸಿಕೊಂಡು ಹೋಗುವಾಗ ರಸ್ತೆ ಸುರಕ್ಷತಾ ಸರಂಜಾಮ ಸೆಪ್ಟಿ ಹಾರನೆಸ್ ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಅಲ್ಲದೇ ಅಂತಹ ಸಮಯದಲ್ಲಿ ವಾಹನವನ್ನು 40 ಕಿ.ಮೀ ಪ್ರತಿ ಗಂಟೆಗಿಂತ ಮೇಲ್ಪಟ್ಟು ಚಲಾಯಿಸಬಾರದು. ಅಡ್ಡ ರಸ್ತೆಗಳು ಮುಖ್ಯ ರಸ್ತೆಗಳಿಗೆ ಸೇರುವ ಸ್ಥಳ ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗುತ್ತಿದ್ದು, ಆಟೋ ಚಾಲಕರು ಹಾಗೂ ಶಾಲಾ ಬಸ್ಸುಗಳ ಚಾಲಕರಲ್ಲಿ ರಸ್ತೆ ಸುರಕ್ಷತಾ ಜಾಗ್ರತಿ ಮೂಡಿಸಲು ಕ್ರಮಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣಾ ಎಸ್.ಎಲ್. ಮಾತನಾಡಿ, ಕಳೆದ ಸಾಲಿನ ಮೇ ತಿಂಗಳಿನಿಂದ 2024ರ ಮೇ ವರೆಗೆ ಒಟ್ಟು 316 ಜನ ವಾಹನ ಸವಾರರು ಗಾಯಾಳುಗಳಾಗಿದ್ದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಾಲಯಿಸಬೇಕು. ಹಾಗೂ ಹಿಂಬದಿ ಸವಾರರಿಗೂ ಸಹ ಹೆಲ್ಮೆಟ್ ಧರಿಸಬೇಕೆಂದು ಹೇಳಿದರು.

ಶಾಲಾ, ಕಾಲೇಜುಗಳ ವಾಹನಗಳಿಗೆ ಜಿಪಿಎಸ್ ಹಾಗೂ ಸಿಸಿ ಕ್ಯಾಮೆರಾ ಆಳವಡಿಕೆಗೆ ಕ್ರಮವಹಿಸಲಾಗಿದೆ. ಆಟೋ ಚಾಲಕರು ಹೆಚ್ಚಿನ ಮಕ್ಕಳನ್ನು ಕೊಡಿಸಿಕೊಂಡು ಹೋಗಬಾರದು, ಹೋದಲ್ಲಿ ಅಂಥಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುದು ಎಂದು ಎಚ್ಚರಿಸಿದರು.

ಈ ಸಭೆಯಲ್ಲಿ ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಶಿವಶಂಕರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ ಚಿಮ್ಮಕೊಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ, ನಗರಸಭೆ ಆಯುಕ್ತ ಶಿವಪ್ಪ ಅಂಬಿಗೇರ ಸೇರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.