ಡೆಂಘೀ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಿ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಿವಸ್ವಾಮಿ

| Published : Jun 16 2024, 01:53 AM IST / Updated: Jun 16 2024, 12:01 PM IST

ಡೆಂಘೀ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಿ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಿವಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಇಲಾಖೆಗಳು ಒಗ್ಗಟ್ಟಿನಿಂದ ಕೈಜೋಡಿಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಡೆಂಘೀ ರೋಗದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವಸ್ವಾಮಿ ಸಲಹೆ ನೀಡಿದರು.  

 ಹಾಸನ :  ಮೊದಲೇ ಎಚ್ಚೆತ್ತುಕೊಂಡು ನಿಯಮ ಅನುಸರಿಸಿದರೆ ಮಾತ್ರ ಡೆಂಘೀ ಜ್ವರ ಬರದಂತೆ ನೋಡಿಕೊಳ್ಳಬಹುದು. ಜತೆಗೆ ಎಲ್ಲಾ ಇಲಾಖೆಗಳು ಒಗ್ಗಟ್ಟಿನಿಂದ ಕೈಜೋಡಿಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಈ ರೋಗದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವಸ್ವಾಮಿ ಸಲಹೆ ನೀಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಡೆಂಘೀ ವೈರಸ್‌ನಿಂದ ಹರಡುವ ರೋಗದ ಬಗ್ಗೆ ಎಚ್ಚರ ವಹಿಸಲು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ‘ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಸಾಕಾಗುತ್ತಿಲ್ಲ. ಜನರಲ್ಲೂ ಕೂಡ ಆತಂಕ ಹೆಚ್ಚಾಗಿ ಕೆಲವರು ತಾಲೂಕು ಆಸ್ಪತ್ರೆ, ಇತರೆ ಕಡೆ ಚಿಕಿತ್ಸೆ ಪಡೆಯದೇ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದಲೇ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಎದುರಿಸುತ್ತಿದೆ. ಇದು ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದನ್ನು ನಿಯಂತ್ರಿಸುವ ಚಿಕಿತ್ಸೆ ಮಾತ್ರ ಇರುವುದರಿಂದ ಇದನ್ನು ಬಾರದ ಹಾಗೆ ನೋಡಿಕೊಳ್ಳುವುದು ಉತ್ತಮ’ ಎಂದು ಕಿವಿಮಾತು ಹೇಳಿದರು.

‘ಈ ಕಾಯಿಲೆ ಬಂದ ಮೇಲೆ ಸಾವು ನೋವುಗಳು ಕೂಡ ಸಂಭವಿಸಬಹುದು. ಹಳ್ಳಿಯಿಂದ ಪಟ್ಟಣದವರೆಗೂ ಎಲ್ಲಾ ಹಂತದಲ್ಲೂ ಸಹ ಎಚ್ಚರಿಕೆಯಿಂದ ರೋಗ ಹರಡದಂತೆ ನೋಡಿಕೊಳ್ಳಬೇಕು. ಬೀದಿ ಬದಿ ಕ್ಯಾಂಟೀನ್‌ಗಳು ಹೆಚ್ಚಾಗಿದ್ದು, ಫುಡ್ ಪಾರ್ಕ್‌ಗಳು ಹೆಚ್ಚುತ್ತಿವೆ. ಎಳನೀರನ್ನು ಕೊಚ್ಚಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಒಡೆದು ಹೋದ ಮಡಿಕೆ, ಪ್ಲಾಸ್ಟಿಕ್, ಟೈರ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಮತ್ತು ಚರಂಡಿಗಳಲ್ಲಿ ತಿಂಗಳುಗಟ್ಟಲೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನ ಉತ್ಪತ್ತಿ ಹೆಚ್ಚಾಗಿ ಸೊಳ್ಳೆಯಿಂದ ಡೆಂಘೀ ಹರಡುತ್ತದೆ’ ಎಂದು ಎಚ್ಚರಿಸಿದರು.

‘ತಿಳಿಯಾದ ಸ್ವಚ್ಛ ನೀರಿನಲ್ಲಿ ಸೊಳ್ಳೆ ಮೊಟ್ಟೆ ಇಡುವುದರಿಂದ ನೀರು ನಿಲ್ಲದ ಹಾಗೆ ನೋಡಿಕೊಂಡರೆ ಸೊಳ್ಳೆಗಳ ಜನನವನ್ನು ತಡೆಯಬಹುದು. ಹಲವಾರು ಇಲಾಖೆಗಳು ಕೈಜೋಡಿಸುವ ಮೂಲಕ ಅವರಿಗೆ ಆರೋಗ್ಯದ ಬಗ್ಗೆ ತರಬೇತಿ ನೀಡಿ ಅರಿವು ಮೂಡಿಸಿ ತಡೆಗಟ್ಟಿದರೆ ಮಾತ್ರ ಈ ರೋಗದಿಂದ ಮುಕ್ತಿ ಪಡೆಯಬಹುದು. ಸ್ಥಳೀಯವಾಗಿ ಯಾವುದೇ ಮಲೇರಿಯ ಪ್ರಕರಣ ವರದಿ ಆಗಿಲ್ಲ. ಹೊರ ಭಾಗಕ್ಕೆ ಹೋಗಿ ವಾಪಸ್ ಬಂದಾಗ ಅವರ ಪರೀಕ್ಷೆ ಮಾಡಿದ ವೇಳೆ ಪಾಸಿಟಿವ್ ಬಂದಿರುವುದು ಬಿಟ್ಟರೆ ನಮ್ಮ ಹಾಸನ ಜಿಲ್ಲೆಯಲ್ಲಿ ಸ್ಥಳೀಯವಾಗಿ ಒಂದು ಪ್ರಕರಣಗಳು ವರದಿಯಾಗಿಲ್ಲ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್ ಮಾತನಾಡಿ, ‘ವಾತಾವರಣದಲ್ಲಿ ವ್ಯತ್ಯಾಸವಾದಂತೆ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಇದರಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳು ಸಿಗದ ಪರಿಸ್ಥಿತಿ ಬಂದಿದೆ. ಡೆಂಘೀ ಜ್ವರದ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯವಾಗಿದೆ. ಮನೆ, ಅಂಗಡಿ, ರಸ್ತೆ ಬದಿ, ಕಚೇರಿಗಳು ಸೇರಿದಂತೆ ಯಾವ ಭಾಗದಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಯಾವ ಜಾಗದಲ್ಲೂ ಸೊಳ್ಳೆ ಉತ್ಪತ್ತಿ ಆಗದಂತೆ ನಿಗಾವಹಿಸಿದರೇ ಮಾತ್ರ ಡೆಂಘೀ ನಿಯಂತ್ರಣ ಮಾಡಲು ಸಾಧ್ಯ’ ಎಂದು ಹೇಳಿದರು.

ಕೀಟಾ ಶಾಸ್ತ್ರಜ್ಞ ಅಧಿಕಾರಿ ರಾಜೇಶ್ ಕುಲಕರ್ಣಿ, ‘ಸೊಳ್ಳೆಯು ಮೊಟ್ಟೆಗಳನ್ನು ನೀರಿನ ಮೇಲೆ ಇಡುತ್ತವೆ. ಆ ಮೊಟ್ಟೆಗಳು ಲಾರ್ವಾ ಆಗಿ ನಂತರ ಪ್ಯೂಪಾಗಳನ್ನಾಗಿ ಮಾರ್ಪಾಡು ಹೊಂದುತ್ತವೆ. ನಂತರ ವಯಸ್ಕ ಸೊಳ್ಳೆಗಳಾಗಿ ಬೆಳವಣಿಗೆ ಹೊಂದುತ್ತದೆ. ವಯಸ್ಕ ಸೊಳ್ಳೆಗಳು ಎರಡು ದಿನದಲ್ಲೆ ಪ್ರಬುದ್ಧತೆ ಹೊಂದಿ ಗಂಡು ಸೊಳ್ಳೆಗಳೊಡನೆ ಸಂಧಿಸಿ ನಂತರ ಮೊಟ್ಟೆ ಬೆಳವಣಿಗೆಗಾಗಿ ಹೆಣ್ಣು ಸೊಳ್ಳೆಗಳು ಮಾನವರನ್ನು ಇಲ್ಲವೇ ಜಾನುವಾರನ್ನು ಕಚ್ಚುತ್ತವೆ. ಆಗ ಸೊಳ್ಳೆ ಬಾಯಿಯ ಜೊಲ್ಲುರಸದಲ್ಲಿ ರೋಗಾಣು ನಮ್ಮ ದೇಹ ಪ್ರವೇಶಿಸಿ ರೋಗ ತಗಲುತ್ತದೆ’ ಎಂದು ವಿವರಿಸಿದರು.

ಇದೇ ವೇಳೆ ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಕಾರ್‍ಯಕಾರಣಿ ಸದಸ್ಯ ಎಚ್.ಬಿ. ಮದನ್ ಗೌಡ, ಆರೋಗ್ಯ ಇಲಾಖೆಯ ನಾಗಪ್ಪ ಸೇರಿ ಇತರರು ಇದ್ದರು.