ಸಾರಾಂಶ
ಕುಮಟಾ: ತಾಲೂಕಿನಲ್ಲಿ ಗಾಳಿಮಳೆ, ಅಪಘಾತ ಇನ್ನಿತರ ಸಂದರ್ಭಗಳಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಪದೇ ಪದೇ ಹಾನಿಯಾಗುವುದರಿಂದ ಜನರಿಗೆ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿನ ಅಡ್ಡಿಯಾಗದೇ ನಿರಂತರವಾಗಿರಲೆಂಬ ಉದ್ದೇಶದಿಂದ ೧೩ ಲಿಂಕ್ ಲೈನ್ ವ್ಯವಸ್ಥೆ ಜಾರಿಗೆ ಟೆಂಡರ್ ಕರೆಯಲಾಗಿದೆ. ಇದರಿಂದ ಒಂದು ವಿದ್ಯುತ್ ಮಾರ್ಗದಲ್ಲಿ ಸಮಸ್ಯೆ ಇದ್ದರೂ ಪರ್ಯಾಯ ಮಾರ್ಗದ ಮೂಲಕ ತುರ್ತಾಗಿ ವಿದ್ಯುತ್ ಪೂರೈಕೆ ಜಾರಿಯಲ್ಲಿರಲಿದೆ ಎಂದು ಹೆಸ್ಕಾಂ ಎಇಇ ರಾಜೇಶ ಮಡಿವಾಳ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಪ್ರಗತಿ ವಿವರಿಸಿದರು. ಮಿರ್ಜಾನದ ಎತ್ತಿನಬೈಲದಲ್ಲಿ ಗ್ರಿಡ್ ಸ್ಥಾಪನೆಗೊಳ್ಳಲಿದ್ದು, ಇದಕ್ಕಾಗಿ ಜಾಗ ಖರೀದಿಗೆ ₹೭೮ ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಗ್ರಿಡ್‌ನಿಂದ ಮಿರ್ಜಾನ, ಕೋಡ್ಕಣಿ, ದೀವಗಿ ಇನ್ನಿತರ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಪಟ್ಟಣ ಪ್ರದೇಶದ ಮಾದರಿಯಲ್ಲೇ ನಿರಂತರ ವಿದ್ಯುತ್ ಸಂಪರ್ಕಕ್ಕೆ ಅನುಕೂಲವಾಗಲಿದೆ. ಇಲಾಖೆಯಿಂದ ೩೫ ಮಂದಿ ಹೊರಗುತ್ತಿಗೆ ನೌಕರರನ್ನು ನಿಯೋಜಿಸಿಕೊಂಡಿದ್ದೇವೆ. ಈಗಾಗಲೇ ಮಳೆಗಾಳಿಗೆ ೩೫೦ ಕಂಬಗಳು, ೧೮ ಪರಿವರ್ತಕಗಳು, ೩.೮೮ ಕಿಮೀ ಕಂಡಕ್ಟರ್‌ಗಳು ಹಾನಿಯಾಗಿದೆ. ಎಲ್ಲೆಡೆ ದುರಸ್ತಿ ಮಾಡಲಾಗಿದೆ. ಶೇ. ೯೯ರಷ್ಟು ಗೃಹಜ್ಯೋತಿ ನೋಂದಣಿಯಾಗಿದೆ ಎಂದರು.ಸಿಡಿಪಿಒ ಶೀಲಾ ಮಾತನಾಡಿ, ಒಟ್ಟು ೩೨ ಕಡೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಆಗಬೇಕಿದೆ. ೩೮ ಕಡೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ ಎಂದರು.
ಶಿಕ್ಷಣ ಇಲಾಖೆಯ ಪ್ರಗತಿ ಕುರಿತು ವಿವರಿಸಿದ ಬಿಇಒ ರಾಜೇಂದ್ರ ಭಟ್, ಮೇದಿನಿ ಹಾಗೂ ಗಂಗಾವಳಿಯಲ್ಲಿ ಶಾಲೆಗೆ ಹೊಸ ಕೊಠಡಿ ನಿರ್ಮಿಸುವ ಅಗತ್ಯವಿದೆ. ಅತಿಥಿ ಶಿಕ್ಷಕರ ನಿಯೋಜನೆಯಿಂದ ಶಿಕ್ಷಕರ ಕೊರತೆ ಅಷ್ಟಾಗಿ ಇಲ್ಲ. ಶಾಲಾ ಕಟ್ಟಡಗಳ ತುರ್ತು ರಿಪೇರಿಗಾಗಿ ₹೩೬.೧೬ ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದರ ಹೊರತಾಗಿ ₹೬೪ ಲಕ್ಷಗಳ ಅನುದಾನಕ್ಕಾಗಿ ವಿಸ್ತ್ರತ ವರದಿಯೂ ಸಲ್ಲಿಕೆಯಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತ್ಯುತ್ತಮವಾಗಿದ್ದು ಒಟ್ಟಾರೆ ಶಾಲೆಗಳ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಫಲಿತಾಂಶ ಉತ್ತಮವಾಗಿದೆ ಎಂದರು. ಸಮನ್ವಯಾಧಿಕಾರಿ ರೇಖಾ ನಾಯ್ಕ ಶಿಕ್ಷಣ ಇಲಾಖೆಯ ಪೂರಕ ಮಾಹಿತಿ ನೀಡಿ ಶೇ. ೯೨.೬ ಸಮವಸ್ತ್ರ ಪೂರೈಕೆಯಾಗಿದೆ. ಪಠ್ಯಪುಸ್ತಕಗಳು ಶೇ. ೫೮.೨೨ ವಿತರಣೆಯಾಗಿದೆ. ಶೂ, ಸಾಕ್ಸ್ ಅನುದಾನ ಬಂದಿಲ್ಲ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ವಿವರಿಸಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿ ಅಂಗನವಾಡಿಯ ೬ ಮತ್ತು ಪ್ರಾಥಮಿಕ ಶಾಲೆಗಳಿಂದ ೬ ಮಂದಿ ಮಕ್ಕಳಿಗೆ ಹೃದಯ ಸಂಬಂಧಿ ಸಮಸ್ಯೆಯನ್ನು ಗುರುತಿಸಲಾಗಿದ್ದು, ಸದ್ಯವೇ ಎ.ಜೆ. ಆಸ್ಪತ್ರೆಯವರು ಬಂದು ಪರಿಶೀಲಿಸಿ, ಮುಂದಿನ ಹಂತದ ಚಿಕಿತ್ಸಾ ಕ್ರಮ ಕೈಗೊಳ್ಳಲಿದ್ದಾರೆ. ಒಟ್ಟು ೪ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ ಎಂದರು. ೨೦೨೪- ೨೫ರ ತಾಪಂ ಬಜೆಟ್ ಮಂಡನೆ
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಎನ್.ಜಿ. ನಾಯಕ ೨೦೨೪- ೨೫ ನೇ ಸಾಲಿಗಾಗಿ ತಾಪಂ ಬಜೆಟ್ ಮಂಡಿಸಿದರು. ಒಟ್ಟೂ ೨೦೨೪- ೨೫ ನೇ ಸಾಲಿಗಾಗಿ ₹೯೬.೩೧೯೩ ಕೋಟಿ ಅನುದಾನ ನಿಗದಿಯಾಗಿದೆ. ೨೦೨೩- ೨೪ನೇ ಸಾಲಿಗಿಂತ ₹೯.೬೧೧೮ ಕೋಟಿ ಹೆಚ್ಚುವರಿ ಅನುದಾನ ಕಲ್ಪಿಸಲಾಗಿದೆ. ತಾಪಂ ಅಧೀನ ಇಲಾಖೆಗಳ ಸಿಬ್ಬಂದಿ, ಅಧಿಕಾರಿ ವೇತನಾಂಶಕ್ಕೆ ವಿವಿಧ ಲೆಕ್ಕಶೀರ್ಷಿಕೆಗಳಡಿ ₹೮೭.೯೨೫೨ ಕೋಟಿ ಅನುದಾನ ಹಂಚಿಕೆಯಾಗಿದೆ. ವೇತನೇತರ ವೆಚ್ಚಕ್ಕಾಗಿ ₹೮.೩೯೪೧ ಕೋಟಿ ಅನುದಾನ ಮೀಸಲಿಡಲಾಗಿದೆ.ಯಾವುದಕ್ಕೆ ಅನುದಾನ ಇಲ್ಲ: ಆರೋಗ್ಯ ಇಲಾಖೆಯ ನೀರು ಮತ್ತು ವಿದ್ಯುಚ್ಛಕ್ತಿಗೆ ಅನುದಾನ, ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಪರಿಶಿಷ್ಟ ಕುಟುಂಬಗಳಿಗೆ ಸಹಾಯ ಅನುದಾನ, ಅಂತರಜಾತಿ ವಿವಾಹ ಪ್ರೋತ್ಸಾಹಧನ, ವಿದ್ಯಾರ್ಥಿನಿಲಯ ನಿರ್ವಹಣೆ, ಗಿರಿಜನ ಕಲ್ಯಾಣದಡಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಹೆಚ್ಚಿನ ಭೋಜನ ಮತ್ತು ವಸತಿ ವೆಚ್ಚಕ್ಕೆ ಅನುದಾನ ಮುಂತಾದವನ್ನು ನಿಗದಿಪಡಿಸಿಲ್ಲ. ಕ್ಷಮೆ ಕೇಳಿದ ಹೆಸ್ಕಾಂ ಎಇಇ
ಸಭೆಗೆ ವಿಳಂಬವಾಗಿ ಬಂದ ಹೆಸ್ಕಾಂ ಎಇಇ ರಾಜೇಶ ಮಡಿವಾಳ, ತಾವು ಕುಳಿತಲ್ಲೇ ಮೊಬೈಲ್‌ನಲ್ಲಿ ಏರುಧ್ವನಿಯಲ್ಲಿ ಮಾತನಾಡುತ್ತಿದ್ದುದರಿಂದ ಆಡಳಿತಾಧಿಕಾರಿ ಎನ್.ಜಿ. ನಾಯಕ ಪ್ರಗತಿ ವರದಿ ಮಂಡನೆ ನಿಲ್ಲಿಸಿದರು. ಏಕೆಂದರೆ ಇದೇ ವೇಳೆ ವಿದ್ಯುತ್ ಕಡಿತವೂ ಇದ್ದುದರಿಂದ ಅಧಿಕಾರಿಯ ಪ್ರಗತಿ ವರದಿ ಕೇಳುತ್ತಿರಲಿಲ್ಲ. ಹೆಸ್ಕಾಂ ಎಇಇಗೆ ಮೊಬೈಲ್‌ನಲ್ಲಿ ಮಾತನಾಡಿ ಮುಗಿಯುತ್ತಿದ್ದಂತೆ ಪುನಃ ಪ್ರಗತಿ ಮಂಡಿಸಲು ಸೂಚಿಸಲಾಯಿತು. ಆದರೆ ಮತ್ತೆ ಮೊಬೈಲ್‌ನಲ್ಲಿ ಮಾತನಾಡತೊಡಗಿದ ಹೆಸ್ಕಾಂ ಎಇಇ ಗೆ, ತುರ್ತು ಕರೆ ಇದ್ದರೆ ಸಭೆಯ ಹಿಂದುಗಡೆ ಕುಳಿತು ಮಾತನಾಡಿ, ಇಲ್ಲಿ ಸಭೆಗೆ ತೊಂದರೆಯಾಗುತ್ತಿದೆ ಎಂದು ಆಡಳಿತಾಧಿಕಾರಿ ಸಮಾಧಾನದಿಂದಲೇ ತಿಳಿಸಿದರು. ಬಳಿಕ ಹೆಸ್ಕಾಂ ಸರದಿಯಲ್ಲಿ ಮಾತಿಗೆ ಮುಂಚೆ ಎಇಇ ರಾಜೇಶ ಮಡಿವಾಳ ತಮ್ಮ ಏರುಧ್ವನಿಯ ಮಾತಿಗೆ ಕ್ಷಮೆ ಕೋರಿದ ಜತೆಗೆ ಮೊಬೈಲ್ ಬಳಕೆಯ ಅನಿವಾರ್ಯತೆಯನ್ನೂ ಸಮರ್ಥಿಸಿಕೊಂಡರು.