ಬಹುಜನ ಸಮಾಜ ಪಕ್ಷದಿಂದ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಗೆ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರತಿನಿತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ದಹಿಸುತ್ತಿದ್ದು ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಬಹುಜನ ಸಮಾಜ ಪಕ್ಷದಿಂದ ಗುರುವಾರ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

ನ್ಯಾಯಾಲಯ ಆವರಣದಲ್ಲಿ ಪ್ರತಿನಿತ್ಯ ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿಗಳನ್ನು ಸುಡಲಾಗುತ್ತಿದೆ. ಪ್ಲಾಸ್ಟಿಕ್ ಸುಟ್ಟ ಕೆಟ್ಟವಾಸನೆ ಸುತ್ತಮುತ್ತ ಪರಿಸರದಲ್ಲಿ ವಿಪರೀತವಾಗಿ ಹರಡುತ್ತಿದೆ.

ಪ್ಲಾಸ್ಟಿಕ್ ಸುಡುವುದರಿಂದ ಸ್ಥಳೀಯ ವಾಸಿಗಳು ತಮಗರಿವಿಲ್ಲದೇ ವಿಷಾನಿಲ ಉಸಿರಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಕರಿಮೋಡದಿಂದ ಪ್ಲಾಸ್ಟಿಕ್ ಹೊಗೆ ಇಡೀ ಸ್ವಚ್ಚಂದ ವಾತಾವರಣವನ್ನು ಕಲುಷಿತ ಗೊಳಿಸುತ್ತಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಅರೋಪಿಸಿದರು.


ಬಿಎಸ್ಪಿ ನಗರಾಧ್ಯಕ್ಷ ಡಿ.ಎಚ್.ವಿಜಯ್‌ಕುಮಾರ್ ಮಾತನಾಡಿ, ಪ್ರತಿನಿತ್ಯ ಪ್ಲಾಸ್ಟಿಕ್ ಸುಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದ ಮಾರಕ ಕಾಯಿಲೆಗೆ ತುತ್ತಾಗುವ ಸಂಭವವಿದೆ. ಅಲ್ಲದೇ ವೃದ್ದರು ಹಾಗೂ ಪುಟಾಣಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಈ ವೇಳೆ ಬಿಎಸ್ಪಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಯೋಜಕ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಮಂಜುಳಾ, ಮುಖಂಡರಾದ ಟಿ.ಎಸ್.ರತ್ನ, ಗಿರೀಶ್, ಹರೀಶ್‌ಮಿತ್ರ, ಕನ್ನಡಸೇನೆ ಮುಖಂಡರಾದ ಜಯಪ್ರಕಾಶ್, ಅನ್ವರ್ ಇದ್ದರು.

ಫೋಟೋ

ತಾಲೂಕು ಬಹುಜನ ಸಮಾಜ ಪಕ್ಷದಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಸುಡದಂತೆ ಗುರುವಾರ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.