ಎಸ್ಸೆಸ್ಸೆಲ್ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಿ

| Published : Jul 29 2024, 01:02 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು

ಗದಗ: ಜಿಲ್ಲೆಯಲ್ಲಿ ಆ. 2 ರಿಂದ 9ರ ವರೆಗೆ ಜರುಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ-3ರನ್ನು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ನಡೆಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ ಹೇಳಿದರು.

ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-3 ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಅಲ್ಲಿ ಕುಡಿವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಅವಧಿಯಲ್ಲಿ ಯಾವುದೇ ಲೋಪ ದೋಷಗಳಾಗದಂತೆ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಎಸ್ಸೆಸ್ಸೆಲ್ಸಿ-3 ಪರೀಕ್ಷೆಯು ಆ. 2 ರಿಂದ 9ರ ವರೆಗೆ ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಒಟ್ಟು 1625 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಜಿಲ್ಲಾ ಕಚೇರಿಯಲ್ಲಿ ವೆಬ್‍ಕಾಸ್ಟಿಂಗ್ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾಲೂಕಿನ ಬಿಇಓ ಕಚೇರಿಯಲ್ಲಿ ಸಹ ಸದರಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಸೂಕ್ತ ಪೊಲೀಸ್‌ ಬಂದೋಬಸ್ತ್‌, ಮಾರ್ಗಾಧಿಕಾರಿಗಳ ವಾಹನ ವ್ಯವಸ್ಥೆ , ತುರ್ತು ಆರೋಗ್ಯ ತಪಾಸಣೆಗೆ ಸೂಕ್ತ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.

ಈ ವೇಳೆ ಜಿಪಂ ಸಿಇಒ ನಿರ್ಮಲಾ, ಡಯಟ್ ಪ್ರಾ. ಜಿ.ಎಲ್. ಬಾರಾಟಕ್ಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ- 3ರ ವೇಳಾಪಟ್ಟಿ: ಆ. 2-ಪ್ರಥಮ ಭಾಷೆ, ಬೆಳಗ್ಗೆ 10.15 ರಿಂದ ಮದ್ಯಾಹ್ನ 1.30ರ ವರೆಗೆ, ಆ. 3 ತೃತೀಯ ಭಾಷೆ ಬೆಳಗ್ಗೆ 10.15 ರಿಂದ ಮದ್ಯಾಹ್ನ1.15 ರವರೆಗೆ, ಎನ್‍ಎಸ್‍ಕ್ಯೂಎಫ್ ವಿಷಯಗಳು -ಬೆಳಗ್ಗೆ 10.15 ರಿಂದ ಮದ್ಯಾಹ್ನ 12.30ರ ವರೆಗೆ, ಆ. 5- (ಕೋರ್ ಸಬ್ಜೆಕ್ಟ್ )ವಿಜ್ಞಾನ, ರಾಜ್ಯಶಾಸ್ತ್ರ ಬೆಳಗ್ಗೆ 10.15 ರಿಂದ ಮದ್ಯಾಹ್ನ 1.30ರವರೆಗೆ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ-ಮಧ್ಯಾಹ್ನ 2 ರಿಂದ ಸಂಜೆ 5.15ರ ವರೆಗೆ, ಆ. 6 (ಕೋರ್ ಸಬ್ಜೆಕ್ಟ್) ಸಮಾಜ ವಿಜ್ಞಾನ- ಬೆಳಗ್ಗೆ 10.15 ರಿಂದ ಮದ್ಯಾಹ್ನ 1.30ರ ವರೆಗೆ, ಆ. 7–ಇಂಗ್ಲೀಷ್, ಕನ್ನಡ-ಬೆಳಗ್ಗೆ 10.15 ರಿಂದ ಮದ್ಯಾಹ್ನ 1.15ರ ವರೆಗೆ, ಆ. 8-( ಕೋರ್‍ಸಬ್ಜೆಕ್ಟ್ ), ಗಣಿತ, ಸಮಾಜ ಶಾಸ್ತ್ರ-ಬೆಳಗ್ಗೆ 10.15 ರಿಂದ ಮದ್ಯಾಹ್ನ 1.30ರ ವರೆಗೆ.