ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಆಯ್ದ ನಾಲ್ಕು ಮದರಸಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಆಧುನೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಡಿಸಿ ಕಚೇರಿಯಲ್ಲಿ ಪಿಎಂ ಹೊಸ 15 ಅಂಶಗಳ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಆಯ್ದ ನಾಲ್ಕು ಮದರಸಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಆಧುನೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ಮದರಸಗಳ ಅಭಿವೃದ್ಧಿಗೆ ನೀಡಲಾಗುತ್ತಿದ್ದ ₹5 ಲಕ್ಷ ಅನುದಾನವನ್ನು ಈ ವರ್ಷದಿಂದ ₹50 ಲಕ್ಷಗಳಿಗೆ ಏರಿಸಲಾಗಿದೆ. ಜಿಲ್ಲೆಯ ಒಟ್ಟು 4 ಸಂಸ್ಥೆಗಳಿಗೆ ತಲಾ ₹50 ಲಕ್ಷದಂತೆ ಒಟ್ಟು ₹2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಚನ್ನಗಿರಿಯ ಫೈಜ್ ಆಮ್ ಮದನಿಯಾ, ಹೊನ್ನಾಳಿ ಹುಣಸಘಟ್ಟದ ಜಾಮಿಯಾ ಯೂಸೆಫ್ ಜಿಯಾವುಲ್ಲಾ ಉಲೂಮ್, ದಾವಣಗೆರೆ ಮಗಾನಹಳ್ಳಿಯ ಖುದಾಯಿಜುಲ್ ಖುಬ್ರಾ ಮತ್ತು ದಾವಣಗೆರೆಯ ಮುಸ್ತಾಫ ನಗರದ ದಾರೂಲ್ ಉಲುಮ್ ರಝಾ ವುಲ್ ಮುಸ್ತಾಪಾ ಬರ್ಕತಿಯಾ ದಾರೂಲ್ ಮದರಸಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು.

ಪ್ರಧಾನ ಮಂತ್ರಿ ಆವಾಸ್‌ (ನಗರ) ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,376 ಮನೆಗಳು ಮಂಜೂರಾಗಿದ್ದು, ಈ ಪೈಕಿ 2,637 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಯೋಜನೆಯಡಿ ಗುರುತಿಸಲಾದ 959 ಅಲ್ಪಸಂಖ್ಯಾತ ಫಲಾನುಭವಿಗಳ ಗುರಿಯನ್ನು ಸಂಪೂರ್ಣವಾಗಿ ತಲುಪಲಾಗಿದೆ. ಇದರಲ್ಲಿ 812 ಮುಸ್ಲಿಂ ಸಮುದಾಯದವರಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ.84.67ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮೂಢನಂಬಿಕೆ ಹೋಗಲಾಡಿಸಲು ಶಿಕ್ಷಣವೇ ಪ್ರಬಲ ಮಾರ್ಗ, ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶೀಘ್ರದಲ್ಲೇ ಪದವಿಪೂರ್ವ ಕಾಲೇಜು ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಹೆಣ್ಣುಮಕ್ಕಳು 8 ಮತ್ತು 9ನೇ ತರಗತಿಯ ನಂತರ ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿ. ಅನುತ್ತೀರ್ಣರಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರಿ ಐ.ಟಿ.ಐ.ಗಳಲ್ಲಿ ''''ವೆಲ್ಡಿಂಗ್ ಕೋರ್ಸ್'''' ಪಡೆಯಲು ಅವಕಾಶ ಕಲ್ಪಿಸುವುದು, ಹರಿಹರ ಮತ್ತು ಕಾಡಜ್ಜಿಗಳಲ್ಲಿ ಸ್ಮಶಾನ ಭೂಮಿಯ ಸಮಸ್ಯೆ ಬಗೆಹರಿಸಲು ತಕ್ಷಣ ಜಾಗ ಗುರುತಿಸಿ ವರದಿ ನೀಡಬೇಕು. ಮತ್ತು ಶಾಲಾ ಮಕ್ಕಳ ಆಧಾರ್ ಕಾರ್ಡ್‌ಗಳನ್ನು ಪ್ರತಿ 5 ವರ್ಷಕ್ಕೊಮ್ಮೆ ಕಡ್ಡಾಯವಾಗಿ ನವೀಕರಿಸಲು ಕ್ರಮ ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಎಎಸ್‌ಪಿ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತೆ ಮಮತಾ ಗೌಡರ್, ಸಿಪಿಒ ಮಲ್ಲಾನಾಯಕ್, ಡಿಡಿಪಿಐ ಕೊಟ್ರೇಶ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

- - -

-6ಕೆಡಿವಿಜಿ42:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.