ಸಾರಾಂಶ
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಸಕಾಲಿಕವಾಗಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕಅಧಿಕಾರಿ ಶಶಿಧರ ಕುರೇರ ಪಿಡಿಒಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಸಕಾಲಿಕವಾಗಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕಅಧಿಕಾರಿ ಶಶಿಧರ ಕುರೇರ ಪಿಡಿಒಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ಪಂಚಾಯತರಾಜ್ ಅಭಿವೃದ್ಧಿ ಅಧಿಕಾರಿಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಕಾಲ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಕೊರತೆ ನೀಗಿಸಲು ತಕ್ಷಣ ಕ್ರಮಕೈಗೊಳ್ಳಲು ಮುಂದಾಗಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಮುಂಜಾಗ್ರತೆಯಾಗಿ ಪರಿಶೀಲನೆ ನಡೆಸಿ ತುರ್ತಾಗಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಕುರಿತು ಚರ್ಚಿಸಿದ ಸಿಇಒ ಹೆಚ್ಚಿನ ಮಾನವ ದಿನಗಳ ಸೃಜನೆ ಹಾಗೂ ಕಾರ್ಮಿಕರಿಗೆ ಕೂಲಿ, ಸಕಾಲದಲ್ಲಿ ವೇತನ ಪಾವತಿಗೆ ಕ್ರಮ ವಹಿಸಬೇಕು. ಇದಲ್ಲದೆ ಪಂಚಾಯತರಾಜ್ ಸಂಸ್ಥೆಗಳು ಮತ್ತು ಅವುಗಳ ಕಾರ್ಯನಿರ್ವಹಣೆಯ ಸ್ಥಿತಿಯನ್ನು ನಿರ್ಣಯಿಸಲಾಯಿತು. ಸ್ಥಳೀಯ ಆಡಳಿತ ಬಲಪಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಲು ಸೂಚಿಸಲಾಯಿತು.ವಸತಿ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಿಇಓ ಅವರು ಬಾಕಿ ಇರುವ ಅರ್ಜಿಗಳನ್ನು ತ್ವರಿತಗೊಳಿಸಲು ಮತ್ತು ಅರ್ಹ ಫಲಾನುಭವಿಗಳಿಗೆ ವಸತಿ ಘಟಕಗಳ ಗುಣಮಟ್ಟ ಮತ್ತು ಸಕಾಲಿಕ ಪೂರ್ಣಗೊಳಿಸುವಿಕೆ ಖಚಿತಪಡಿಸಿಕೊಳ್ಳಲು ಪಿಡಿಓಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರ ಕುಂದುಕೊರತೆ ಪರಿಣಾಮಕಾರಿಯಾಗಿ ಪರಿಹರಿಸಲು ಮತ್ತು ತಳಮಟ್ಟದಲ್ಲಿ ಸೇವೆ ಒದಗಿಸಲು ಎಲ್ಲ ಅಧಿಕಾರಿಗಳು ಪೂರ್ವಭಾವಿಯಾಗಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.