ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನಲ್ಲಿ ಮಂಗಳವಾರ ಸಂಜೆ ಭಾರಿ ಸುಳಿ ಗಾಳಿ ಬೀಸಿದ್ದು ಭಾರಿ ಪ್ರಮಾಣದಲ್ಲಿ ಕೃಷಿ ನಾಶವಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್, ನಿಟ್ಟೆ , ಅತ್ತೂರು ಕಾಬೆಟ್ಟು ಪ್ರದೇಶಗಳಲ್ಲಿ ಮಳೆ ಬಿದ್ದಿದೆ. ಆದರೆ ಮಾಳ ಕೆರುವಾಶೆ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸಿದ್ದು ಅಡಕೆ ಗಿಡಗಳು ಧರೆಶಾಹಿಯಾಗಿವೆ.ಕಾರ್ಕಳದ ಕೆರುವಾಶೆ ಗ್ರಾಮದ ಜಯಪುರ ಮೈಯದಿ ಬಿನ್ ಹಸನಬ್ಬ ಎಂಬವರ ತೋಟದಲ್ಲಿ ಸುಮಾರು 45 ಕ್ಕೂ ಹೆಚ್ಚು ಅಡಕೆ ಗಿಡಗಳು ಮುರಿದು ಬಿದ್ದಿದ್ದು 25 ಸಾವಿರ ರು. ನಷ್ಟ ಸಂಭವಿಸಿದೆ. ಕಾರ್ಕಳದ ಅನಿತಾ ಪ್ರವೀಣ್ ಪಾಂಡಿ ಎಂಬವರ ತೋಟದಲ್ಲಿ ಸುಮಾರು 40 ಅಡಕೆ ಮರಗಳು ಹಾನಿಯಾಗಿದ್ಸು 18000 ರು. ಹಾನಿ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಹಲವೆಡೆ ಮಂಗಳವಾರ ಅಪರಾಹ್ನ ಮಳೆಯೊಂದಿಗೆ ಭಾರಿ ಗಾಳಿ ಬೀಸಿದ್ದು ವ್ಯಾಪಕ ಹಾನಿ ಸಂಭವಿಸಿದೆ.ಕಕ್ಕಿಂಜೆ, ಚಾರ್ಮಾಡಿ, ಮುಂಡಾಜೆ,ಕಲ್ಮಂಜ, ಚಿಬಿದ್ರೆ, ತೋಟತ್ತಾಡಿ, ಉಜಿರೆ ಮೊದಲಾದ ಪರಿಸರದಲ್ಲಿ ಗಾಳಿಯ ತೀವ್ರತೆ ತೀರಾ ಹೆಚ್ಚಾಗಿತ್ತು.ಚಾರ್ಮಾಡಿಯ ಪೆಟ್ರೋಲ್ ಪಂಪ್ ಸಮೀಪ ಭಾರೀ ಗಾತ್ರದ ಮರವೊಂದು ಅಸ್ಯಮ್ಮ ಎಂಬವರ ಮನೆ ಮೇಲೆ ಮುರಿದು ಬಿದ್ದು ಮನೆಗೆ ಸಂಪೂರ್ಣ ಹಾನಿ ಸಂಭವಿಸಿದೆ.ಮನೆಯಲ್ಲಿ ಯಾರು ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಬಿದ್ರೆಯ ಬೊಟ್ಟುಮನೆ ರಮಾನಂದ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.ಕಕ್ಕಿಂಜೆ ಪೇಟೆಯಲ್ಲಿಯೂ ಗಾಳಿಯ ಅಬ್ಬರಕ್ಕೆ ಎರಡು ಅಂಗಡಿಗಳಿಗೆ ಹಾನಿ ಸಂಭವಿಸಿದೆ.
ಕನ್ಯಾಡಿ ಗ್ರಾಮದ ಪಾರ್ನಡ್ಕದಲ್ಲಿ ಗಾಳಿಯ ಅಬ್ಬರಕ್ಕೆ ಮನೆಯೊಂದರ ಶೀಟು ಹಾರಿ ಹೋಗಿದೆ. ಕಲ್ಮಂಜ ಗ್ರಾಮದ ಮೂಲಾರು ಸಮೀಪ ಪುಟ್ಟ ನಾಯ್ಕ ಎಂಬವರ ಕೊಟ್ಟಿಗೆಯ ಶೀಟುಗಳು ಹಾರಿ ಹೋಗಿವೆ. ಮುಂಡಾಜೆ-ಕುಡೆಂಚಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಉರುಳಿ ವಾಹನ ಸಂಚಾರ ಸ್ಥಗಿತಗೊಂಡಿದೆ.ಸಾವಿರಾರು ಅಡಕೆ, ರಬ್ಬರ್ ಗಿಡಗಳು ಧರಾಶಾಯಿಯಾಗಿವೆ.ವಿದ್ಯುತ್ ಪೂರೈಕೆ ಅಸ್ತವ್ಯಸ್ತ:ಸುಂಟರಗಾಳಿಯ ರಭಸಕ್ಕೆ ಬೆಳ್ತಂಗಡಿ ಮೆಸ್ಕಾಂ ಉಪವಿಭಾಗದ ಅಲ್ಲಲ್ಲಿ 41 ವಿದ್ಯುತ್ ಕಂಬಗಳು, ಉಜಿರೆ ಮೆಸ್ಕಾಂ ಉಪ ವಿಭಾಗದ ನಾನಾ ಭಾಗಗಳಲ್ಲಿ 58 ಕಂಬಗಳು ಮುರಿದುಬಿದ್ದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದೆ.ಇನ್ನಷ್ಟು ಕಡೆ ವಿದ್ಯುತ್ ಕಂಬಗಳು ಮುರಿದುಬಿದ್ದಿರುವ ಸಾಧ್ಯತೆ ಇದೆ. ಈಗಾಗಲೇ ಮಾ. 12ರಂದು ತಾಲೂಕಿನಲ್ಲಿ ಬೀಸಿದ ಬಾರಿ ಗಾಳಿಗೆ 130 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದವು.
ವಿದ್ಯುತ್ ಕಂಬಗಳು ಮುರಿದುಬಿದ್ದ ಕಾರಣ, ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿರುವುದರಿಂದ ತಾಲೂಕಿನ ವಿದ್ಯುತ್ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.