ಸರ್ಕಾರದ ತೀರ್ಮಾನಗಳ ಹಿಂದೆ ಹಿಂದೂಗಳನ್ನು ಶೋಷಿಸುವ ಹುನ್ನಾರ: ಬಿ.ವೈ. ವಿಜಯೇಂದ್ರ

| Published : Apr 10 2025, 01:17 AM IST

ಸರ್ಕಾರದ ತೀರ್ಮಾನಗಳ ಹಿಂದೆ ಹಿಂದೂಗಳನ್ನು ಶೋಷಿಸುವ ಹುನ್ನಾರ: ಬಿ.ವೈ. ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಬುಧವಾರ ಮಡಿಕೇರಿಗೆ ಆಗಮಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಬುಧವಾರ ಮಡಿಕೇರಿಗೆ ಆಗಮಿಸಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

ನಗರದ ಚೌಡೇಶ್ವರಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಹಿಂದೂಗಳನ್ನು ಶೋಷಿಸುವ ಹುನ್ನಾರ ಸರ್ಕಾರದ ಅನೇಕ ತೀರ್ಮಾನಗಳ ಹಿಂದಿದೆ.

ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ. ಕಾಶ್ಮೀರದಲ್ಲಿ ಮುಸಲ್ಮಾನರಿಗೆ ನ್ಯಾಯ ದೊರಕಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು ಎಂದರು.

ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಇದ್ದಾಗ ಚುನಾವಣೆ ಸಂದರ್ಭ ಹೋರಾಟ ಮಾಡಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಮರೆತಿದ್ದಾರೆ. ಇಂದು ಅನೇಕ ಹಿಂದುಳಿದ ಸಮಾಜಗಳಿವೆ. ಅಹಿಂದ ಎಂದು ಹೇಳಿದರು ಕೇವಲ ಮುಸ್ಲಿಂ ಪರವಾಗಿ ಹೊರಟಿದ್ದಾರೆ. 50 ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ ಎಂದರು.

ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಮಾಡಿದೆ ಅಂತ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಬೆಲೆ ಜಾಸ್ತಿ ಮಾಡಿ ಜನರ ಮೇಲೆ ಅದರ ಹೊರೆ ಹಾಕಿಲ್ಲ. ಉಜ್ವಲ್ ಸಿಲಿಂಡರ್ ಕೇವಲ 550 ರುಪಾಯಿಗೆ ಕೊಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ವಿನಯ್ ಸೋಮಯ್ಯ ಏನು ದ್ರೋಹ ಮಾಡಿದ್ರು. ಅವರಿಗೆ ಪೊಲೀಸರ ಮೂಲಕ ಬೆದರಿಕೆ ಹಾಕಿದ್ರು ಇಲ್ಲಿ ಶಾಸಕರು , ಇಂತಹ ಅಯೋಗ್ಯ ಸರ್ಕಾರ ಮತ್ತು ಶಾಸಕರಿಗೆ ಬುದ್ಧಿ ಕಲಿಸಬೇಕು. ಬಡವರ ವಿರೋಧಿ, ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು. ಬಿಜೆಪಿಯ ಯಾವ ಕಾರ್ಯಕರ್ತರು ಹೆದರಿಕೊಳ್ಳಬಾರದು. ಅದನ್ನು ಧೈರ್ಯದಿಂದ ಎದುರಿಸಬೇಕು ಎಂದರು.

ದೇಶದ್ರೋಹಿಗಳನ್ನು ವಿರೋಧಿಸುವ ಪಕ್ಷ ಬಿಜೆಪಿಯಾಗಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಸಿದ್ದರಾಮಯ್ಯ ರಕ್ಷಣೆ ನೀಡುತ್ತಾರೆ. ಪರಿಶಿಷ್ಟ ಜಾತಿ - ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಸರ್ಕಾರ ವಿನಿಯೋಗ ಮಾಡದೇ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಟಿಎಂನಂತಾಗಿದೆ ಎಂದು ಆರೋಪಿಸಿದರು.

ವಿನಯ್ ಸೋಮಯ್ಯ ಸಾವಿಗೆ ಸ್ಥಳೀಯ ಶಾಸಕರೇ ಕಾರಣ - ಶೌಚಾಲಯ ಸರಿಪಡಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲೀಗ ಅಯೋಗ್ಯ ಸರ್ಕಾರ ಅಧಿಕಾರದಲ್ಲಿದೆ.

ಭ್ರಷ್ಟ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಯೋಗ್ಯ, ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ- ಅಶೋಕ್‌

ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಆದರೆ ಪೊಲೀಸರು ಮುಂದೆಯೂ ನೀವೆ ಇರುತ್ತೀರಿ. ನಿಮ್ಮ ಸ್ಟಾರ್‌ಗಳು ಬದಲಾಗಲ್ಲ ಎಂದು ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಮೇಶ್ವರ ಕೆಫೆಯಲ್ಲಿ ಇಡೀ ಹೊಟೇಲ್ ಬ್ಲಾಸ್ಟ್ ಮಾಡಲಾಯಿತು. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆಯಿತು. ಡಿಕೆಶಿ ಮಾತ್ರ ಅವರೆಲ್ಲಾ ನಮ್ಮ ಬ್ರದರ್ಸ್ ಎನ್ನುತ್ತಾರೆ, ಹಾಲು ಆಲ್ಕೋಹಾಲ್ ಎಲ್ಲದರ ಮೇಲೂ ತೆರಿಗೆ ಹಾಕಲಾಗಿದೆ. ಇದು ಪ್ರಜಾಪ್ರಭುತ್ವ ಸರ್ಕಾರನಾ ಎಂದು ಪ್ರಶ್ನಿಸಿದರು.

ರಸ್ತೆ ಕಿತ್ತು ಹೋಗಿದ್ದರೆ, ಆಸ್ಪತ್ರೆಯಲ್ಲಿ ಔಷಧಿಗಳ ಇಲ್ಲ ಅಂದ್ರೆ ನೀವು ಸೂಪರ್ ಆಗಿವೆ ಅಂತ ಸ್ಟೇಟಸ್ ಹಾಕಬೇಕು. ಆಸ್ಪತ್ರೆಗಳು ಅಮೇರಿಕ ದಂತಹ ಆಸ್ಪತ್ರೆಗಳಿವೆ ಅಂತ ಹಾಕಬೇಕು ಎಂದು ವ್ಯಂಗ್ಯ ಮಾಡಿದ ಅವರು, ಕೊಡಗಿನಲ್ಲಿ ಜಾತಿ ಜಾತಿಗಳ ನಡುವೆ ಹೊಡೆದಾಡುತ್ತಿದ್ದಾರೆ. ಐದು ವರ್ಷಗಳಿಗೆ ಒಮ್ಮೆ ಬದಲಾಗಲೇಬೇಕಲ್ಲ. ಇಂದು ಪ್ರತಿಯೊಬ್ಬರ ಮೇಲೆ 1 ಲಕ್ಷ ಸಾಲ ಹೊರಿಸಿದ್ದಾರೆ. ಬಡವರ ರಕ್ತ ಹೀರಿ ಹೆಂಡತಿಗೆ 2 ಸಾವಿರ ಕೊಟ್ಟು, ಗಂಡನಿಂದ 5 ಸಾವಿರ ಕಿತ್ತುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ನಿರಂತರ ಹೋರಾಟ- ಶ್ರೀರಾಮುಲು

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಈ ಸರ್ಕಾರ ಜನರ ಜೀವಕ್ಕೆ ಗ್ಯಾರಂಟಿ ಎನ್ನುವ ಸ್ಥಿತಿಗೆ ಬಂದು ತಲುಪಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಜಿಹಾದಿಗಳ ರಾಕ್ಷಸತನ ಜಾಸ್ತಿ ಆಗುತ್ತದೆ. ಹಿಂದೂಗಳ ಕೊಲೆ ಆಗುತ್ತದೆ. ಹಾಗೆ ಅಮಾಯಕರಾದ ವಿನಯ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಭಾವಿಸುತ್ತೇನೆ. 2028 ನಮ್ಮ ಸರ್ಕಾರ ಬರುತ್ತೆ ಪೊನ್ನಣ್ಣ ಅವರೆ ಅವಾಗ ನೀವು ಪಾತಾಳದಲ್ಲಿ ಅಡಗಿದರೂ ಬಿಡಲ್ಲ. ಮಡಿಕೇರಿಯಿಂದ ಎಳೆದುಕೊಂಡು ಹೋಗಿ ಜೈಲಿಗೆ ಹಾಕುತ್ತೇವೆ ಎಂದು ಹೇಳಿದರು.

ಕೆಲವು ಪೊಲೀಸ್ ಅಧಿಕಾರಿಗಳಿಂದಾಗಿ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಶೌಚಾಲಯದಲ್ಲಿ ಹೆಣ್ಣುಮಕ್ಕಳ ವಿಡಿಯೋ ಮಾಡಿದರೆ ಅದು ಮಕ್ಕಳಾಟ ಎನ್ನುತ್ತಾರೆ ಹೋಂಮಿನಿಸ್ಟರ್. ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ಆದರೆ ಅದೆಲ್ಲಾ ಮಾಮೂಲಿ ಅಂತಾರೆ. ಇದನ್ನೆಲ್ಲಾ ಸಹಿಸಿಕೊಳ್ಳಬೇಕಾ? ಸಿದ್ದರಾಮಯ್ಯನವರೇ ಎಷ್ಟು ಹಿಂದೂಗಳ ಮೇಲೆ ಕೇಸ್ ಹಾಕ್ತೀರಾ? ಎಷ್ಟು ಜನರ ಹತ್ಯೆ ಮಾಡಿಸ್ತೀರಾ?

ಆದರೆ ನಾವು ಯಾವಾಗಲೂ ಜಗ್ಗಲ ಬಗ್ಗಲ್ಲ. ನಿರಂತರ ಮೂರು ವರ್ಷಗಳ ಕಾಲ ನಮ್ಮ ಹೋರಾಟ ಇರುತ್ತದೆ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ನರ ಹಂತಕ ಮುಖ್ಯಮಂತ್ರಿ ಸಿದ್ದರಾಮಯ್ಯ- ನಳೀನ್‌

ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ನರ ಹಂತಕ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ, ಅತಿ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಈ ಹಿಂದೆ 22 ಹತ್ಯೆಯಾಗಿದ್ದು, ಈಗಲೂ ನಿರಂತರವಾಗಿ ಹತ್ಯೆ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ಇಲ್ಲ. ಜಿಹಾದಿ ಸರ್ಕಾರ ಇದೆ. ಉಚಿತದ ಹೆಸರಿನಲ್ಲಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಸಾಮಾನ್ಯ ರೈತರ ಕೃಷಿಕರ ಹೊಟ್ಟೆಗೆ ಹೊರೆಯಾಗುತ್ತಿದೆ. ಮುಂದೆ ಗಾಳಿಗೂ ತೆರಿಗೆ ಹಾಕುವ ಪರಿಸ್ಥಿತಿ ಬರುತ್ತದೆ ಎಂದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ಉಲ್ಲೇಖವಾದವರನ್ನು ಇನ್ನೂ ಎಫ್ ಐ ಆರ್ ನಲ್ಲಿ ದೂರು ದಾಖಲಿಸಲಿಲ್ಲ. ಕಾನೂನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.

ಜನಾಕ್ರೋಶ ಯಾತ್ರೆಯಲ್ಲಿ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮೈಸೂರು ಶಾಸಕ ಶ್ರೀವತ್ಸ, ಎಂ.ಎಲ್ಸಿ ಸುಜಾಕುಶಾಲಪ್ಪ, ರವಿಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.