ನೀರು ಪೋಲಾಗದಂತೆ ಕ್ರಮವಹಿಸಿ : ಜೆ.ಟಿ.ಪಾಟೀಲ

| Published : May 13 2025, 01:05 AM IST

ನೀರು ಪೋಲಾಗದಂತೆ ಕ್ರಮವಹಿಸಿ : ಜೆ.ಟಿ.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಬೀಳಗಿ ಮತಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತುಂತೆ ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ನೀರು ಪೋಲಾಗದಂತೆ ಕ್ರಮವಹಿಸಲು ಬೀಳಗಿ ಶಾಸಕ ಜೆ.ಟಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಬೀಳಗಿ ಮತಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತುಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ನಿರ್ವಹಣೆ ಬಹಳ ಮುಖ್ಯವಾಗಿದ್ದು, ಮೊದಲು ಪೋಲಾ ಗುವ ನೀರನ್ನು ತಡೆದರೆ ಕುಡಿಯುವ ನೀರು ಕೊಡುವಲ್ಲಿ ತೊಂದರೆ ಆಗುವುದನ್ನು ಕಡಿಮೆ ಮಾಡಬಹುದಾಗಿದೆ. ಕೆಲವು ನಲ್ಲಿಗಳಿಗೆ ವಾಲ್‌ ಕೂಡ ಇರುವುದಿಲ್ಲ. ನೀರು ಸಾಕಾದರೂ ಬಂದ್ ಮಾಡದೇ ನೀರು ಪೋಲಾಗುತ್ತಿದೆ. ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು ತಿಳಿಸಿದರು.

ಕೆಲವರು ನಳದ ಟ್ಯಾಪ್ ಚಾಲೂ ಇಟ್ಟುಕೊಂಡೇ ಬಟ್ಟೆ ಒಗೆಯುತ್ತಿರುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಈ ರೀತಿ ಕಂಡುಬಂದಲ್ಲಿ ಅಂತವರಿಗೆ ತಿಳಿವಳಿಕೆ ನೀಡಿ, ಮತ್ತೆ ಅದೇ ರೀತಿ ಮಾಡುವುದು ಕಂಡುಬಂದಲ್ಲಿ ನೀರಿನ ಕರದ ಎರಡು ಪಟ್ಟು ವಸೂಲಿ ಮಾಡಲಾಗುವುದೆಂದು ಗ್ರಾಮಗಳಲ್ಲಿ ಡಂಗೂರ ಸಾರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ನೀರು ಪೋಲಾಗುವುದನ್ನು ತಡೆದು ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬೀಳಗಿ ಮತಕ್ಷೇತ್ರದಲ್ಲಿ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ತಾಲೂಕಿನ ಗ್ರಾಮಗಳು ಸೇರ್ಪಡೆಗೊಂಡಿದ್ದು, ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಕುಡಿಯುವ ನೀರಿನ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಪ್ರತಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಬೋರವೆಲ್ ಮೂಲಕ ಪೂರೈಸುವ ಗ್ರಾಮಗಳ ಮಾಹಿತಿ ಪಡೆದ ಅವರು, ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಸಲು ಕ್ರಮವಹಿಸಲು ತಿಳಿಸಿದರು. ಮತಕ್ಷೇತ್ರದ ಗ್ರಾಮಗಳಲ್ಲಿ ನೀರು ಬರದಿದ್ದರೆ ಜನಪ್ರತಿನಿಧಿಗಳಿಗೆ ಪೋನ್ ಕರೆಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಮುಂದಗನೂರು, ಚಿಕ್ಕಹಂಚಿನಾಳ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಕಂಡುಬಂದಿದ್ದು, ಅಧಿಕಾರಿಗಳು ಜವಾಬ್ದಾರಿ ಅರಿತು ನೀರು ಪೂರೈಸಲು ಕ್ರಮವಹಿಸಬೇಕು. ಅಧಿಕಾರಿ ಕುಡಿಯುವ ನೀರಿನ ವಿಷಯದಲ್ಲಿ ಬೇಜವಾಬ್ದಾರಿ ತೋರುವಂತಿಲ್ಲ. ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಕುಡಿಯುವ ನೀರಿನ ವಸ್ತುಸ್ಥಿತಿ ಅರಿತು ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳುಂತೆ ತಿಳಿಸಿದರು.

ಬಾಗಲಕೋಟೆ ತಾಲೂಕಿನಲ್ಲಿ ಬೀಳಗಿ ಕ್ಷೇತ್ರಕ್ಕೆ 10 ಗ್ರಾಮ ಪಂಚಾಯಿತಿಗಳು ಬರಲಿದ್ದು, 147 ಬೋರವೆಲ್‌ ಗಳಲ್ಲಿ 120 ಬೋರವೆಲ್‌ ಚಾಲು ಇವೆ. ಬಾಕಿ 29 ಬೋರವೆಲ್‌ 4 ತಿಂಗಳಿನಿಂದ ಬಂದ್ ಆಗಿರುವುದಾಗಿ ವ್ಯಾಪ್ತಿಯ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ಬಾದಾಮಿ ತಾಲೂಕಿನಲ್ಲಿ ಕಂಕಣಬೂದಿಹಾಳ ಮತ್ತು ಕೈನಕಟ್ಟಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ತುರ್ತು ಕ್ರಮ ಕೈಗೊಳ್ಳಲು ಅಭಿಯಂತರರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಗಲಗೊಂಬ ಗ್ರಾಮಗಳಲ್ಲಿ ಪರಿಶಿಷ್ಟ ಕಾಲೋನಿಯ ನೀರಿನ ಸಮಸ್ಯೆಯನ್ನು ಕಾರ್ಯರ್ವಾಹಕ ಅಧಿಕಾರಿ, ಸಹಾಯಕ ಅಭಿಯಂತರ ಹಾಗೂ ಅಲ್ಲಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಡಿ ಬಗೆಹರಿಸುವ ಕೆಲಸ ಮಾಡಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಮುಖ್ಯ ಅಭಿಯಂತರ ಆಕಾಶ ಸೇರಿದಂತೆ ಬೀಳಗಿ, ಬಾಗಲಕೋಟೆ ಹಾಗೂ ಬಾದಾಮಿ ತಹಸೀಲ್ದಾರರು, ಸಹಾಯಕ ಅಭಿಯಂತರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.