ಸಾರಾಂಶ
ಕನ್ನಡಿಗರ ಮೇಲೆಯೇ ನಿರಂತರ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಾ ಬಂದಿದ್ದು, ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದು ತಾಲೂಕು ವಿಶ್ವ ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.
ಮುಂಡರಗಿ: ನಮ್ಮ ರಾಜ್ಯದ ಅನ್ನ ತಿಂದು, ನೀರು ಕುಡಿದು ಇಲ್ಲಿಯೇ ದುಡಿದು ಹಣಗಳಿಸಿ ಶ್ರೀಮಂತರಾಗಿ ಮೆರೆಯುತ್ತಿರುವವರು ಇಂದು ಕನ್ನಡಿಗರ ಮೇಲೆಯೇ ನಿರಂತರ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಾ ಬಂದಿದ್ದು, ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದು ತಾಲೂಕು ವಿಶ್ವ ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.
ಅವರು ಶನಿವಾರ ನಿರಂತರವಾಗಿ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಹಾಗೂ ಹಲ್ಲೆ ಖಂಡಿಸಿ ಶನಿವಾರ ವಿವಿಧ ಕನ್ನಡಪರ ಸಂಘಟನೆ ಒಕ್ಕೂಟದೊಂದಿಗೆ ಕರೆದಿದ್ದ ಕರ್ನಾಟಕ ಬಂದ್ ಕರೆಗೆ ಬೆಂಬಲಿಸಿ ಇಲ್ಲಿನ ತಾಲೂಕು ವಿಶ್ವ ಕನ್ನಡ ರಕ್ಷಣಾ ವೇದಿಕೆಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಕೆ. ತಳಗಡೆ ಮಾತನಾಡಿ, ಬೆಳಗಾವಿಯಲ್ಲಿ ಕರ್ನಾಟಕದ ಕೆ.ಎಸ್.ಆರ್.ಟಿ.ಸಿ. ಬಸ್ ಮೇಲೆ ಎಂಇಎಸ್ ನವರು ಹಲ್ಲೆ ನಡೆಸಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲ ಇಲಾಖೆ, ಬ್ಯಾಂಕು, ಕಾರ್ಖಾನೆಗಳಲ್ಲಿ ಸಾರ್ವಜನಿಕರೊಂದಿಗೆ ಕನ್ನಡದಲ್ಲಿ ಪತ್ರ ವ್ಯವಹಾರ ನಡೆಸಬೇಕು. ಹಿಂದಿ ಹಾಗೂ ಆಂಗ್ಲಭಾಷೆಯಲ್ಲಿ ನಾಮಫಲಕ ಹಾಕಬಾರದು. ಕನ್ನಡದಲ್ಲಿಯೇ ಹಾಕಬೇಕು. ಒಂದು ವೇಳೆ ಯಾರಾದರೂ ಹಾಕಿದರೆ ಅವರ ವಿರುದ್ಧ ಕ್ರಮ ಜರುಗಿಸಿ ಕನ್ನಡ ನಾಮಫಲಕ ಹಾಕಿಸಬೇಕು ಎಂದರು.ನಿಂಗರಾಜ ಹಾಲಿನವರ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಕನ್ನಡಿಗನೂ ಸಹ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದು, ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾವ್ಯಾರೂ ಸುಮ್ಮನಿರುವುದಿಲ್ಲ. ಕನ್ನಡಿಗರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುವವರ ವಿರುದ್ಧ ತಕ್ಷಣವೇ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಶಂಶುದ್ದೀನ ಹಾರೋಗೇರಿ ಮನವಿ ಪತ್ರ ಓದಿದರು. ಎಂ.ಕೆ. ತಳಗಡೆ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜಾಭಕ್ಷಿ ದಂಡಿನ, ಅಲ್ಲಾಭಕ್ಷಿ ಅಳವಂಡಿ, ಪಿ.ಎಸ್. ಗೌಡ್ರ, ಬಾಷಾಸಾಬ್ ಡಂಬಳ, ಮಹ್ಮದರಫಿ ಖಾದರನವರ್, ಮಾಬೂಸಾಬ್ ಶಾಬಾಯಿ, ಮಧುಮತಿ ಮಡಿವಾಳರ, ಶೋಭಾ ಮಡಿವಾಳರ, ನಜೀರ್ ಹೊನ್ನಾಳಿ, ಎಸ್.ಎ. ಹಾರೋಗೇರಿ, ರವಿ ಡೊಣ್ಣಿ, ರಿಯಾಜ್ ಬಾಗಳಿ, ಇಸ್ಮಾಯಿಲ್ ಸಾಬ್ ಮುಲ್ಲಾ, ಯಲ್ಲಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.