ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ 2025-26ನೇ ಸಾಲಿನ ನಾಲ್ಕನೇ ತ್ರೈಮಾಸಿಕ (ಜನವರಿ 2026ರಿಂದ ಮಾರ್ಚ್ 2026ರ ವರೆಗೆ) ಫ್ಲಾಯಿಂಗ್ ಸ್ಕ್ವಾಡ್ ಸಭೆ ನಡೆಯಿತು. ಅನಧಿಕೃತ ಲಾಟರಿ, ಮಟ್ಕಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಸೂಚಿಸಿದರು.
ಗದಗ: ಜಿಲ್ಲೆಯಲ್ಲಿ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗುವವರ ಮೇಲೆ ಕಾನೂನು ರೀತಿಯಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಇತ್ತೀಚೆಗೆ ಜರುಗಿದ 2025-26ನೇ ಸಾಲಿನ ನಾಲ್ಕನೇ ತ್ರೈಮಾಸಿಕ (ಜನವರಿ 2026ರಿಂದ ಮಾರ್ಚ್ 2026ರ ವರೆಗೆ) ಫ್ಲಾಯಿಂಗ್ ಸ್ಕ್ವಾಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಟ್ಕಾ ಪ್ರಕರಣಗಳಲ್ಲಿ ಬಾಕಿ ಇರುವ ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಅವುಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು. ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್‌ಟಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿದ್ದು ಗಡಿಪಾರು ಮಾಡಿರುವ ಆರೋಪಿತರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿ ತಮ್ಮ ಕಾರ್ಯ ವ್ಯಾಪ್ತಿಯಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಡಿವೈಎಸ್‌ಪಿ ಮಹಾಂತೇಶ ಸಜ್ಜನ ಮಾತನಾಡಿ, ಜ. 2026ರಲ್ಲಿ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸವರಾಜ ಮೈಲಪ್ಪ ದೊಡ್ಡಮನಿಯನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಗೆ ಮತ್ತು ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ವಿರೂಪಾಕ್ಷಪ್ಪ ಶಂಕ್ರಪ್ಪ ಸಂಗಪ್ಪ ಶೆಟ್ಟರ ಈತನನ್ನು ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಗೆ ಗಡಿಪಾರು ಮಾಡಿ ಆದೇಶಿಸಿರುವ ಬಗ್ಗೆ ಸಭೆಗೆ ಮಾಹಿತಿ ಸಲ್ಲಿಸಿದರು. ಮೂರಕ್ಕಿಂತ ಹೆಚ್ಚು ಮಟಕಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರನ್ನು ಗಡಿಪಾರು ಶಿಕ್ಷೆಗೆ ಒಳಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಟಕಾ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದು ತಿಳಿಸಿದರು.ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಚಿನಗುಂಡಿ, ಅಭಿವೃದ್ಧಿ ಅಧಿಕಾರಿ ನಾಗರಾಜ ಉಪ್ಪಾರ, ವಾಣಿಜ್ಯ ತೆರಿಗೆ ಇಲಾಖೆ ರಾಜಶೇಖರಯ್ಯ ಕಾಲವಾಡಮಠ ಇದ್ದರು.