ಹಾವೇರಿ:ಮುಂಬರುವ ಪಶ್ಚಿಮ ಪದವೀಧರರ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಸತ್ವ ಪರೀಕ್ಷೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಹಾವೇರಿ ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ಜೊತೆಗೆ ಕ್ರಿಯಾಶೀಲ ಕಾರ್ಯಕರ್ತರಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಗೆಲುವಿಗೆ ಶ್ರಮಿಸಬೇಕು. ಆರ್.ಎಂ. ಕುಬೇರಪ್ಪ ಅವರು ಪಕ್ಷ ಕಷ್ಟದಲ್ಲಿದ್ದಾಗ ಸಂಘಟನೆಗೆ ಶ್ರಮಿಸಿರುವರು. ಮುಂಬರುವ ದಿನಗಳಲ್ಲಿ ಅವರಿಗೆ ಗೌರವಯುತ ಸ್ಥಾನ ನೀಡಲಾಗುವುದು ಎಂದರು. ಕೆಪಿಸಿಸಿ ರಾಜ್ಯ ಉಸ್ತುವಾರಿ ಮಯೂರ ಜಯಕುಮಾರ ಮಾತನಾಡಿ, ಪಶ್ಚಿಮ ಪದವೀಧರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಾಲ್ಕು ಜಿಲ್ಲೆಯ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ ಪಕ್ಷ ನಿಷ್ಠರ ನೂತನ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದರು.ಪಕ್ಷದ ಅಭ್ಯರ್ಥಿ ಲಿಂಬಿಕಾಯಿ ಮಾತನಾಡಿ, ಪದವೀಧರರ ಮತದಾನಕ್ಕೆ ಸದಸ್ಯತ್ವ ನೋಂದಣಿಗೆ ಇನ್ನೂ ಸಮಯಾವಕಾಶ ಇದೆ. ಈಗಾಗಲೇ ಸದಸ್ಯತ್ವ ಪಡೆದವರು. ತಾಂತ್ರಿಕ ತೊಂದರೆ ಅನುಭವಿಸುತ್ತಿರುವ ಕಾರಣಕ್ಕೆ ಅವರ ಸಹಾಯವಾಣಿ ತೆರೆಯಲಾಗಿದೆ. ತಳಮಟ್ಟದಲ್ಲಿ ಪದವೀಧರರನ್ನು ಗುರುತಿಸಿ ಸದಸ್ಯತ್ವ ನೋಂದಣಿಗೆ ಶ್ರಮಿಸಲಾಗುವುದು ಎಂದರು.ಮಾಜಿ ಸಂಸದ ಐ.ಜಿ. ಸನದಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ, ಶಾಸಕರಾದ ಶ್ರೀನಿವಾಸ್ ಮಾನೆ ಹಾಗೂ ಯಾಸೀರ್ ಅಹ್ಮದ್ ಖಾನ್ ಪಠಾಣ, ಮುಖಂಡರಾದ ಆನಂದಸ್ವಾಮಿ ಗಡ್ಡದ್ದೇವರಮಠ, ಆರ್.ಎಂ. ಕುಬೇರಪ್ಪ ಮಾತನಾಡಿದರು.ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪ್ರೇಮಾ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಮೈದೂರ ಹಾಗೂ ಪ್ರಭುಗೌಡ ಬಿಷ್ಟನಗೌಡ್ರ, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ದರ್ಶನಕುಮಾರ ಲಮಾಣಿ ಇದ್ದರು.