ಶಾಲೆ ಮುಚ್ಚುವ ವಿರುದ್ಧ ಬೀದಿಗಿಳಿದು ಹೋರಾಟ: ರಾಜೇಶೇಖರ್‌

| Published : Nov 25 2025, 04:15 AM IST

ಸಾರಾಂಶ

ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತಾ ಸರ್ಕಾರ ಸಾವಿರಾರು ಶಾಲೆಗಳನ್ನು ಮುಚ್ಚುವ ಕೆಲಸ ನಡೆಸುತ್ತಿದೆ. ಇದರ ವಿರುದ್ಧ ಪೋಷಕರು ಮತ್ತು ಶಿಕ್ಷಕರು ಬೀದಿಗಳಿದು ದನಿ ಎತ್ತಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ವಿ.ಎನ್‌.ರಾಜಶೇಖರ್‌ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತಾ ಸರ್ಕಾರ ಸಾವಿರಾರು ಶಾಲೆಗಳನ್ನು ಮುಚ್ಚುವ ಕೆಲಸ ನಡೆಸುತ್ತಿದೆ. ಇದರ ವಿರುದ್ಧ ಪೋಷಕರು ಮತ್ತು ಶಿಕ್ಷಕರು ಬೀದಿಗಳಿದು ದನಿ ಎತ್ತಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ವಿ.ಎನ್‌.ರಾಜಶೇಖರ್‌ ಕರೆ ನೀಡಿದರು.

ಸಮಿತಿಯು ‘ಕೆಪಿಎಸ್‌ ಮ್ಯಾಗ್ನೆಟ್‌ ಶಾಲೆ-ಅಳಿವಿನಂಚಿನಲ್ಲಿ ಸರ್ಕಾರಿ ಶಾಲೆಗಳು’ ಕುರಿತು ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಒಂದೂ ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ನಿತ್ಯ ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ, ಉದ್ದೇಶಿತ 700 ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಿಸಲು ಸುತ್ತಲಿನ ಯಾವ್ಯಾವ ಸರ್ಕಾರಿ ಶಾಲೆಗಳನ್ನು ವಿಲೀನ ಅಂದರೆ ಮುಚ್ಚಬೇಕು ಎಂದು ಪಟ್ಟಿ ಸಮೇತ ಆದೇಶಗಳನ್ನು ಶಿಕ್ಷಣ ಇಲಾಖೆ ಹೊರಡಿಸುತ್ತಲೇ ಇದೆ ಎಂದು ಕಿಡಿಕಾರಿದರು.

ವಿಶ್ರಾಂತ ಕುಲಪತಿ ಪ್ರೊ. ಎ. ಮುರುಗೆಪ್ಪ ಮಾತನಾಡಿ, ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ವಿರುದ್ಧ ಜನ ದಂಗೆ ಏಳುತ್ತಾರೆ ಎನ್ನುವ ಕಾರಣಕ್ಕೆ ಸತ್ಯ ಮರೆ ಮಾಚಲಾಗುತ್ತಿದೆ. ಸಚಿವರು ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ ಗ್ರಾಪಂಗೆ ಒಂದರಂತೆ ಹಂತ ಹಂತವಾಗಿ 6000 ಕೆಪಿಎಸ್‌ ಶಾಲೆಗಳನ್ನು ಆರಂಭಿಸಿ ಅವುಗಳಲ್ಲಿ ರಾಜ್ಯದ 40 ಸಾವಿರ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಬಂದ್‌ ಮಾಡುವುದು ಸರ್ಕಾರದ ಯೋಜನೆ. ಇದನ್ನು ಜನ ಮನಗಾಣಬೇಕು. ಹಳ್ಳಿಯ, ಕುಗ್ರಾಮದ ಸರ್ಕಾರಿ ಶಾಲೆ ಮುಚ್ಚಿದರೆ ಬಡ ಮಕ್ಕಳು ಎಲ್ಲಿಗೆ ಹೋಗಬೇಕು? ಸರ್ಕಾರಿ ಶಾಲೆ ಮುಚ್ಚಿ ಖಾಸಗಿ ಶಾಲೆಗಳಿಗೆ ಇನ್ನಷ್ಟು ಅವಕಾಶ ಮಾಡಿಕೊಡುವ ಹುನ್ನಾರವೂ ಇದರಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆ ವಿಶ್ವಬ್ಯಾಂಕ್‌ನಿಂದ 2000 ಕೋಟಿ ರು. ಸಾಲ ಪಡೆಯುತ್ತಿದೆ. ಯಾವ ಷರತ್ತಿನ ಮೇಲೆ ಪಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಲಿ. ಕಾಯಂ ಶಿಕ್ಷಕರ ನೇಮಕ ನಿಷೇಧವೇ ಜಾಗತೀಕರಣ ನೀತಿಯಾಗಿದೆ. ಜನರಿಂದ ಶಿಕ್ಷಣಕ್ಕಾಗಿ ಪಡೆದ ವಿಶೇಷ ತೆರಿಗೆಯಿಂದ ರೂಪಿಸಿದ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸಿಕ್ಕಿದ್ದು ಬರೀ ಕಟ್ಟಡಗಳು ಬಿಟ್ಟರೆ ಕಾಯಂ ಶಿಕ್ಷಕರಾಗಲಿ, ಗುಣಮಟ್ಟದ ಶಿಕ್ಷಣವಾಗಲಿ, ಸೌಲಭ್ಯಗಳಾಗಲಿ ದೊರೆತಿಲ್ಲ ಎಂದರು.

ಸಮಿತಿ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಐಶ್ವರ್ಯ, ರಾಜ್ಯ ಕಾರ್ಯದರ್ಶಿ ಮಹೇಶ್‌ ಎಸ್‌.ಜಿ. ಮತ್ತಿತರರು ಮಾತನಾಡಿ, ಸಾರ್ವಜನಿಕರು, ಪೋಷಕರು ಎಚ್ಚೆತ್ತು ಪ್ರತಿಭಟನೆ ಮೂಲಕ ಸರ್ಕಾರಿ ಉಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.