ಸಾರಾಂಶ
ಟಕ್ಕೋಡ ಕ್ರಾಸ್‌ನಿಂದ ಹಿರೇಪಡಸಲಗಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಪುನಃ ಪ್ರಾರಂಭಿಸಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಟಕ್ಕೋಡ ಕ್ರಾಸ್‌ನಿಂದ ಹಿರೇಪಡಸಲಗಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಪುನಃ ಪ್ರಾರಂಭಿಸಿದೆ. ಇದರಿಂದ ಟಕ್ಕಳಕಿ, ಟಕ್ಕೋಡ ಹಾಗೂ ಹಿರೇಪಡಸಲಗಿ ಗ್ರಾಮಗಳ ವಾಹನ ಸವಾರರು, ಸಾರ್ವಜನಿಕರು ಹರ್ಷಗೊಂಡಿದ್ದಾರೆ.ಕನ್ನಡಪ್ರಭದಲ್ಲಿ ಜೂ.4ರಂದು ಅರ್ಧಕ್ಕೆನಿಂತ ರಸ್ತೆ ಕಾಮಗಾರಿ; ಸವಾರರಿಗೆ ಕಿರಿಕಿರಿ ಎಂಬ ಶೀರ್ಷಿಕೆ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಿದೆ. ಹಿರೇಪಡಸಲಗಿ ಗ್ರಾಮದಿಂದ ಟಕ್ಕಳಕಿ ಸೀಮೆಯ ಹಳ್ಳದ ಲಕ್ಷ್ಮೀ ದೇವಸ್ಥಾನದವರೆಗಿನ ರಸ್ತೆ ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಬೊಮ್ಮಾಯಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಸಿ.ಸಿ.ಪಾಟೀಲರು ಈ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ್ದರು. ಅಂದಿನಿಂದ ಈವರೆಗೆ ಒಂದಲ್ಲ ಒಂದು ಕುಂಟುನೆಪ ಹೇಳಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.ಈಗ ಮತ್ತೆ ಕಾಮಗಾರಿ ಪ್ರಾರಂಭವಾಗಿದ್ದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಡೆದ ಸ್ಥಳಕ್ಕೆ ಹಿರೇಪಡಸಲಗಿ ಪಿಕೆಪಿಎಸ್‌ನ ನಿರ್ದೇಶಕ ಮಹೇಶ ದೇಶಪಾಂಡೆ, ತಾಲೂಕು ರೈತಸಂಘದ ಅಧ್ಯಕ್ಷ ಸಿದ್ಧನಗೌಡ ಪಾಟೀಲ, ಗೋಪಾಲ ಬಳಗಾರ, ಶ್ರೀಶೈಲ ಮೈಗೂರ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲು ಹುಟಗಿ ಮುಂತಾದವರು ಭೇಟಿನೀಡಿ ಪರಿಶೀಲಿಸಿದರು.
ಆಗ್ರಹ:ರಸ್ತೆ ಕಾಮಗಾರಿ ಪುನಃ ಪ್ರಾರಂಭಿಸಿದ್ದಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ. ರಸ್ತೆ ಹಾಳಾಗಿರುವುದರಿಂದ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಿ ಮುಗಿಸಬೇಕೆಂದು ಒತ್ತಾಯಿಸಿದ್ದಾರೆ.