ತೀರಾ ದುಸ್ಥಿತಿಯಲ್ಲಿರುವ ತಲಕಾಡಿನ ಮೇಜರ್ ಓವರ್ ಹೆಡ್ ಟ್ಯಾಂಕ್

| Published : Jun 21 2024, 01:05 AM IST

ಸಾರಾಂಶ

ಓವರ್ ಹೆಡ್ ಟ್ಯಾಂಕ್ ಭಾರ ಹೊತ್ತ ಕೆಳಗಡೆಯ ಪಿಲ್ಲರ್ ಕಂಬಗಳು ಬಿರುಕು ಬಿಟ್ಟಿವೆ. ಮೇಲಗಡೆ ಟ್ಯಾಂಕ್ ಸುತ್ತ ಅಲ್ಲಲ್ಲಿ ಸಿಮೆಂಟ್ ಚಕ್ಕೆಗಳು ಉದುರಿ ನೆಲಕ್ಕೆ ಬೀಳುತ್ತಿವೆ. ಭಾಗಶಃ ಟ್ಯಾಂಕ್ ಆಯಸ್ಸೇ ಮುಗಿದು ಕುಸಿದು ಬೀಳುವ ದುಸ್ಥಿತಿಯಲ್ಲಿದೆ. ಆದರೆ ಗ್ರಾಮದ ಮೇಜರ್ ಟ್ಯಾಂಕ್ ಆದ್ದರಿಂದ ನೀರು ಸರಬರಾಜಿಗೆ ಪಂಚಾಯಿತಿಯವರು ಅನಿವಾರ್ಯವಾಗಿ ಬಳಸುತ್ತಿದ್ದಾರೆ.

ಅಕ್ರಂಪಾಷ ತಲಕಾಡು

ಕನ್ನಡಪ್ರಭ ವಾರ್ತೆ ತಲಕಾಡು

ತಲಕಾಡು ಸುಂದರ್ ಪಾರ್ಕ್ ಆವರಣದಲ್ಲಿರುವ 2.5 ಲಕ್ಷ ಲೀಟರ್ ನೀರು ಶೇಖರಣೆ ಸಾಮರ್ಥ್ಯದ ಗ್ರಾಮದ ಮೇಜರ್ ಓವರ್ ಹೆಡ್ ಟ್ಯಾಂಕ್ ಕಟ್ಟಡ ತೀರಾ ದುಸ್ಥಿತಿಯಲ್ಲಿದೆ.

ಓವರ್ ಹೆಡ್ ಟ್ಯಾಂಕ್ ಭಾರ ಹೊತ್ತ ಕೆಳಗಡೆಯ ಪಿಲ್ಲರ್ ಕಂಬಗಳು ಬಿರುಕು ಬಿಟ್ಟಿವೆ. ಮೇಲಗಡೆ ಟ್ಯಾಂಕ್ ಸುತ್ತ ಅಲ್ಲಲ್ಲಿ ಸಿಮೆಂಟ್ ಚಕ್ಕೆಗಳು ಉದುರಿ ನೆಲಕ್ಕೆ ಬೀಳುತ್ತಿವೆ. ಭಾಗಶಃ ಟ್ಯಾಂಕ್ ಆಯಸ್ಸೇ ಮುಗಿದು ಕುಸಿದು ಬೀಳುವ ದುಸ್ಥಿತಿಯಲ್ಲಿದೆ. ಆದರೆ ಗ್ರಾಮದ ಮೇಜರ್ ಟ್ಯಾಂಕ್ ಆದ್ದರಿಂದ ನೀರು ಸರಬರಾಜಿಗೆ ಪಂಚಾಯಿತಿಯವರು ಅನಿವಾರ್ಯವಾಗಿ ಬಳಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ:

ಮೀಟಿಂಗ್ ಅದೂ ಇದೂ ಎಂದು ಕಚೇರಿಯಲ್ಲಿ ಕಾಲದೂಡುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳು, ಕುಡಿಯುವ ನೀರು ಸರಬರಾಜು ಸ್ಥಾವರಗಳ ಬಳಿಗೆ ಆಗಾಗ್ಗೆ ಧಾವಿಸಿ ಸ್ಥಿತಿಗತಿಗಳ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದು, ಘಟಕಗಳ ದುಸ್ಥಿತಿಗೆ ಕಾರಣ ಎಂಬುದು ಜನರ ಆರೋಪವಾಗಿದೆ

ರಾಷ್ಟ್ರೀಯ ಗ್ರಾಮಾಂತರ ಕುಡಿಯುವ ನೀರಿನ ಯೋಜನೆಯಡಿ, ಇಲ್ಲಿನ ಓವರ್ ಹೆಡ್ ಟ್ಯಾಂಕ್ 1984ರ ಮಾ.10 ರಲ್ಲಿ ನಿರ್ಮಾಣವಾಗಿದೆ. ಅಂದಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಹಾಗೂ ಬನ್ನೂರು ಅಂದಿನ ಶಾಸಕ ಟಿ.ಪಿ. ಬೋರಯ್ಯ ಅವರಿಂದ ಟ್ಯಾಂಕ್ ಉದ್ಘಾಟನೆ ನೆರವೇರಿದೆ.

ಇಲ್ಲಿನ ಓವರ್ ಹೆಡ್ ಟ್ಯಾಂಕ್ ಸತತ 40 ವರ್ಷಗಳ ಸುದೀರ್ಘ ಕಾಲ ಇಡೀ ಗ್ರಾಮಕ್ಕೆ ನಿರಂತರವಾಗಿ ನೀರು ಪೂರೈಸುವ ಅವಿಸ್ಮರಣೀಯ ಸೇವೆ ಸಲ್ಲಿಸಿದೆ. ಕಾಲ ಕಾಲಕ್ಕೆ ಇಲ್ಲಿನ ಓವರ್ ಹೆಡ್ ಟ್ಯಾಂಕ್ ದುರಸ್ತಿ ನಿರ್ವಹಣೆ ನಿರ್ವಹಿಸಿದ್ದರೆ ಇನ್ನಷ್ಟು ವರ್ಷ ಬಾಳಿಕೆ ಬರುವ ಸಂಭವವಿತ್ತು. ಆದರೆ ಸಂಬಂಧಪಟ್ಟವರ ನಿರ್ಲಕ್ಷ್ಯ ಧೋರಣೆಯಿಂದ ಇನ್ನೇನು ತನ್ನಷ್ಟಕ್ಕೆ ತಾನೇ ಕುಸಿದು ಬೀಳುವ ದುಸ್ಥಿತಿಗೆ ತಲುಪಿದೆ.

ದಾನಿಗಳು ನೀಡಿದಷ್ಟು ಜಾಗ ಈಗಿಲ್ಲ:

ಯಳಂದೂರು ಮಾಂಬಳ್ಳಿ ಗ್ರಾಮದ ದಾನಿ ದಿ. ರೇವಣ್ಣ ಸ್ವಾಮಿಯವರು ಸ್ಥಳೀಯ ಇಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಕೊಳ್ಳಲು 100×100 ಜಾಗವನ್ನು ಪಂಚಾಯಿತಿಗೆ ದಾನವಾಗಿ ಕೊಟ್ಟಿದ್ದಾರೆ. ಈ ಕುರಿತು ಶಿಲಾನ್ಯಾಸದ ಕಲ್ಲಿನಲ್ಲೇ ದಾನಿಗಳ ಹೆಸರು ಜಾಗದ ಅಳತೆ ಕೆತ್ತಿಸಲಾಗಿದೆ.

ಆದರೆ, ಇಲ್ಲಿ ಟ್ಯಾಂಕ್ ನಿರ್ಮಿಸಿರುವ ಜಾಗ ಪ್ರಸ್ತುತ 50×50 ಇಲ್ಲ, 100×100 ಜಾಗ ಇದ್ದಿದ್ದರೆ ಹಳೇ ಟ್ಯಾಂಕ್ ಪಕ್ಕದಲ್ಲೇ ಮತ್ತೊಂದು ಹೊಸ ಟ್ಯಾಂಕ್ ನಿರ್ಮಿಸಲು ಅನುಕೂಲವಾಗುತಿತ್ತು. ಈಗ ಇಲ್ಲಿ ನೂತನ ಟ್ಯಾಂಕ್ ನಿರ್ಮಿಸಲು ಹಳೇ ಟ್ಯಾಂಕ್ ಕೆಡವಲೇ ಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಪಂ ಅಧ್ಯಕ್ಷೆ ಶೋಭ ಮಲ್ಲಾಣಿ ತಿಳಿಸಿದ್ದಾರೆ.

ಈಗಾಗಲೆ ಇಲ್ಲಿನ ಮೇಜರ್ ಓವರ್ ಹೆಡ್ ಟ್ಯಾಂಕ್ ದುಸ್ಥಿತಿಯ ಬಗ್ಗೆ ಸ್ಥಳೀಯ ಗ್ರಾಪಂ ತಾಲೂಕು ಕೇಂದ್ರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ಈಗಾಗಲೆ ವರದಿ ಸಲ್ಲಿಸಿದೆ.