ತಲಕಾವೇರಿ: 13ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆ
KannadaprabhaNewsNetwork | Published : Oct 21 2023, 12:30 AM IST
ತಲಕಾವೇರಿ: 13ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆ
ಸಾರಾಂಶ
ಅಖಿಲ ಭಾರತ ಸನ್ಯಾಸಿ ಸಂಘ ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 13ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ.
ಕನ್ನಡಪ್ರಭ ವಾರ್ತೆ ಕುಶಾಲನಗರ ಸ್ವಚ್ಛ ಮನಸ್ಸಿನ ಮೂಲಕ ಸ್ವಚ್ಛ ಪ್ರಕೃತಿ, ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ಸನ್ಯಾಸಿ ಸಂಘ ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 13ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡಿದರು. ನಾಡಿನಲ್ಲಿ ಜಲಮೂಲ ಪ್ರಕೃತಿ ಮೂಲಗಳು ಹಲವು ರೀತಿಯಲ್ಲಿ ಕಲುಷಿತಗೊಳ್ಳುತ್ತಿದ್ದು ಈ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕಾಗಿದೆ. ಇಲ್ಲವಾದಲ್ಲಿ ಜೀವ ಸಂಕುಲಕ್ಕೆ ಅನಾಹುತ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಮನೆಯ ಕಸ ವಿಲೇವಾರಿಯನ್ನು ಸಮರ್ಪಕವಾಗಿ ಸಹಜವಾಗಿ ಮಾಡಿದಲ್ಲಿ ಮಾತ್ರ ಸ್ವಚ್ಛತೆ ಕಾಣಲು ಸಾಧ್ಯ ಎಂದ ಶ್ರೀಗಳು ಜಾಗೃತಿಯ ಮತ್ತು ಅರಿವಿನ ಕೊರತೆ ನಡುವೆ ನದಿ ಸಂರಕ್ಷಣೆಗೆ ಹೆಣಗಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಿದರು. ತಲಕಾವೇರಿಯಿಂದ ತಮಿಳುನಾಡಿನ ಬಂಗಾಲ ಕೊಲ್ಲಿ ತನಕ ಸಾಗಿ ಜನರಲ್ಲಿ ಅರಿವು ಜಾಗೃತಿ ಮೂಡಿಸುತ್ತಿರುವ ಸಾಧುಸಂತರ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಯಾತ್ರೆಗೆ ಶ್ರೀಗಳು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಸೂರ್ಯನಾರಾಯಣ ಮಾತನಾಡಿ, ಜೀವನದಿ ಕಾವೇರಿಯ ಸಂರಕ್ಷಣೆಯ ನಿಟ್ಟಿನಲ್ಲಿ ಮಾಡುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅಖಿಲ ಭಾರತ ಸನ್ಯಾಸಿ ಸಂಘದ ಕಾರ್ಯದರ್ಶಿ ಆತ್ಮಾನಂದ ಸ್ವಾಮೀಜಿ ಮಾತನಾಡಿ, ಕಳೆದ 13 ವರ್ಷಗಳಿಂದ ಕಾವೇರಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜನರಿಗೆ ಅರಿವು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಸಾಗುತ್ತಿದೆ ಎಂದರು. ರಥಯಾತ್ರೆಯಲ್ಲಿ ತಂದಿರುವ ಕಾವೇರಿ ಮಾತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ಕಳಸಗಳಲ್ಲಿ ಸಂಗ್ರಹಿಸಿ ಪೂಜೆ ಸಲ್ಲಿಸಿ ರಥಯಾತ್ರೆಯಲ್ಲಿ ಕೊಂಡಯಲಾಯಿತು. ಈ ತೀರ್ಥವನ್ನು ಕಾವೇರಿ ಸಂಗಮವಾಗುವ ಬಂಗಾಲ ಕೊಲ್ಲಿ ಸಮುದ್ರ ಸಂಗಮದಲ್ಲಿ ನ. 13ರಂದು ಪೂಜೆ ಸಲ್ಲಿಸಿ ವಿಸರ್ಜಿಸಲಾಗುವುದು ಎಂದು ಅಖಿಲ ಭಾರತ ಸನ್ಯಾಸಿ ಸಂಘದ ಕಾರ್ಯದರ್ಶಿ ಆತ್ಮಾನಂದ ಸ್ವಾಮೀಜಿ ಮಾಹಿತಿ ನೀಡಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾವೇರಿ ಜಾಗೃತಿ ರಥಯಾತ್ರೆಯ ಸಮಗ್ರ ಮಾಹಿತಿ ಒದಗಿಸಿದರು. ತಲಕಾವೇರಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಅವರು ನಾಡಿನಲ್ಲಿ ಉತ್ತಮ ಮಳೆ ಬೆಳೆಯೊಂದಿಗೆ ಸರ್ವ ಅಭಿವೃದ್ಧಿಗೆ ಪ್ರಾರ್ಥನೆ ಸಲ್ಲಿಸಿ ತೀರ್ಥಯಾತ್ರೆ ತಂಡಕ್ಕೆ ಶುಭ ಕೋರಿದರು. ನದಿ ಸ್ವಚ್ಛತಾ ಆಂದೋಲನದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕ್ಷೇತ್ರದಲ್ಲಿ ಯಾತ್ರ ತಂಡದ ಪ್ರಮುಖರು ಅರಮೇರಿ ಶ್ರೀಗಳನ್ನು, ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಸ್ಥಾಪಕ ಶ್ರೀ ಗಣೇಶ ಸ್ವರೂಪನಂದ ಗಿರಿ ಸ್ವಾಮೀಜಿ, ಶ್ರೀರಂಗಪಟ್ಟಣ ಗೌತಮ ಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿ ಸಂಘದ ಸ್ವಾಮಿ ಮೇಘಾನಂದ ಸರಸ್ವತಿ, ಸ್ವಾಮಿ ಶಿವರಾಮನಂದ, ಮುರುಗಾನಂದ ಸರಸ್ವತಿ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕೊಕ್ಕಲೆರ ಧರಣಿ ಸೇರಿದಂತೆ ಸಾಧುಸಂತರು ಇದ್ದರು. ಯಾತ್ರ ತಂಡ ಭಾಗಮಂಡಲದಲ್ಲಿ ಕಾವೇರಿ ಮಾತೆಯ ಪ್ರತಿಮೆಗೆ ಅಷ್ಟ ಅಭಿಷೇಕ ನೆರವೇರಿಸಿ ಸಂಗಮದಲ್ಲಿ ಮಹಾ ಆರತಿ ಬೆಳಗಾಯಿತು.