ಪ್ರತಿಭಾ ಪುರಸ್ಕಾರ ಮಕ್ಕಳ ಸಾಧನೆಗೆ ಪ್ರೇರಣೆ

| Published : May 25 2025, 01:22 AM IST / Updated: May 25 2025, 01:23 AM IST

ಸಾರಾಂಶ

ರಾಮನಗರ: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇತರೆ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.

ರಾಮನಗರ: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇತರೆ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.

ನಗರದ ಐಜೂರು ಬಡಾವಣೆಯಲ್ಲಿನ ಟಿಪ್ಪು ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿಂ ಮತ್ತು ನಗರಸಭೆ ಸದಸ್ಯ ಸಮದ್ ಮಸೀದಿ ಇ - ನೂರ್ ಉಲ್ ಇಸ್ಲಾಂ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಗುವಿನಲ್ಲೂ ಒಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಹೇಳಿದರು.

ಸಮಾಜದಲ್ಲಿ ಬಹಳಷ್ಟು ಜನರು ಒಳ್ಳೆಯ ಕೆಲಸ ಮಾಡುತ್ತಾರೆ. ಅವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ ಮನಸ್ಸಿಗೆ ಆನಂದವಾಗುತ್ತದೆ. ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸ ಮಾಡುವ ಛಲ ಬರುತ್ತದೆ. ಯುವ ಮುಖಂಡ ಮಹಮ್ಮದ್ ಅಲೀಂ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಲಾಭದ ಅಪೇಕ್ಷೆ ಬಯಸುವುದಿಲ್ಲ. ಆ ಸಾಲಿನಲ್ಲಿ ದಿ.ಮುಹಿಬ್ ಪಾಷರವರ ಸೇವೆ ಅನನ್ಯವಾದದ್ದು. ಅವರು ಎಂದೂ ಅಧಿಕಾರಕ್ಕೆ ಆಸೆಪಟ್ಟವರಲ್ಲ. ಹುಟ್ಟೂರು ರಾಮನಗರದ ಬಗೆಗೆ ವಿಶೇಷ ಕಾಳಜಿ ಹೊಂದಿದ್ದರು. ಊರಿನ ಹಿತಕ್ಕೆ ಧಕ್ಕೆಯಾಗುವ , ಕೋಮುಸಾಮರಸ್ಯ ಕದಡುವ ದುರ್ಘಟನೆಗಳು ಸಂಭವಿಸಿದರೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ಹೇಳಿದರು.

ನಗರಸಭೆ ಸದಸ್ಯ ಆರ್.ಎ.ಮಂಜುನಾಥ್ ಮಾತನಾಡಿ, ವಿದ್ಯೆ ದುಡ್ಡಿನ ಅಪ್ಪ. ವಿದ್ಯೆ ಇದ್ದರೆ ಏನು ಬೇಕಾದರು ಸಾಧನೆ ಮಾಡಬಹುದು. ಪ್ರತಿ ವಾರ್ಡಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡುವ ಹುಮ್ಮಸ್ಸು ಹೆಚ್ಚಾಗಲಿದೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮಾತನಾಡಿ, ಮಕ್ಕಳು ಜೀವನದಲ್ಲಿ ಗುರಿ ಸಾಧಿಸಲು ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇಟ್ಟುಕೊಂಡು ಮುನ್ನಡೆಯಬೇಕು. ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ನಗರಸಭೆ ಸದಸ್ಯೆ ಪಾರ್ವತಮ್ಮ ಮಾತನಾಡಿ, ಮಕ್ಕಳನ್ನು ಹೆಡೆಯುವುದು ಮುಖ್ಯವಲ್ಲ ಅವರಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ ಸತ್ಪ್ರಜೆಯಾಗಿ ರೂಪಿಸುವುದು ಮುಖ್ಯ. ಪೋಷಕರು ಬಾಲ್ಯದಲ್ಲಿಯೇ ಮಕ್ಕಳನ್ನು ದುಡಿಯಲು ಹಾಕಿ ಅರಳುವ ಪ್ರತಿಭೆಯನ್ನು ಚಿವುಟುವುದು ಸರಿಯಲ್ಲ. ಮಕ್ಕಳಿಗೆ ಉತ್ತೇಜನೆ ನೀಡುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಮಸೀದಿ ಇ ನೂರು ಉಲ್ ಇಸ್ಲಾಂ ಅಧ್ಯಕ್ಷ ಹಾಜಿ ಹನೀಫ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ನರಸಿಂಹ, ಸಮದ್, ಯುವ ಮುಖಂಡ ಮಹಮ್ಮದ್ ಅಲೀಂ, ಮುಖಂಡರಾದ ದೊಡ್ಡಿ ಸುರೇಶ್ , ಜಬೀ, ಸುಬಾನ್, ಉಸ್ಮಾನ್, ವಸೀಂ, ಮಸೀದಿ ಕಮಿಟಿ ಸದಸ್ಯರಾದ ಇನಾಯತ್ , ಮುನೀರ್ , ಫೈರೋಜ್ ಖಾನ್ , ರಜಾಖ್ , ಸಲೀಂ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ................

ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು, ಗುರು-ಹಿರಿಯರಿಗೆ ಗೌರವ ಕೊಡಬೇಕು. ಸಮಯ ಪರಿಪಾಲನೆ ಮಾಡಿದಲ್ಲಿ ಏನನ್ನಾದರೂ ಸಾಧಿಸಬಹುದು. ಮಕ್ಕಳಲ್ಲಿ ಅಗಾಧ ಶಕ್ತಿ ಅಡಗಿದೆ. ಅದನ್ನು ಉಪಯೋಗಿಸುವಂತಹ ಕಲೆ ಅವರಿಗೆ ಕಲಿಸಬೇಕಿದೆ. ಪ್ರತಿ ವಿದ್ಯಾರ್ಥಿ ಯೂ ಮುಂದಿನ ಭವಿಷ್ಯಕ್ಕಾಗಿ ಜೀವನದ ಮೌಲ್ಯಗಳ ಮಹತ್ವವನ್ನು ಅರಿತುಕೊಂಡರೆ ಮೌಲ್ಯಾಧಾರಿತ ಜೀವನ ನಡೆಸಲು ಸಾಧ್ಯ.

-ಮಹಮ್ಮದ್ ಅಲೀಂ, ಕಾಂಗ್ರೆಸ್ ಯುವ ಮುಖಂಡರು, ರಾಮನಗರ

24ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಐಜೂರು ಬಡಾವಣೆಯಲ್ಲಿನ ಟಿಪ್ಪು ವೃತ್ತದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.