ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಪ್ರತಿಭೆಗೆ ಪುರಸ್ಕಾರ ಸಿಗಲ್ಲ: ಪ್ರಸನ್ನಾನಂದ ಪುರಿ ಸ್ವಾಮೀಜಿ

| Published : Aug 25 2025, 01:00 AM IST

ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಪ್ರತಿಭೆಗೆ ಪುರಸ್ಕಾರ ಸಿಗಲ್ಲ: ಪ್ರಸನ್ನಾನಂದ ಪುರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿಗೆ ರಾಮಾಯಣ ಮಹಾಕಾವ್ಯ ಕೊಟ್ಟಂತಹ ಮಹರ್ಶಿ ವಾಲ್ಮೀಕಿಗೆ ತಕ್ಕುದಾದ ಪುರಸ್ಕಾರ ಇನ್ನೂ ಸಿಗುತ್ತಾ ಇಲ್ಲ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಜಗತ್ತಿಗೆ ರಾಮಾಯಣ ಮಹಾಕಾವ್ಯ ಕೊಟ್ಟಂತಹ ಮಹರ್ಶಿ ವಾಲ್ಮೀಕಿಗೆ ತಕ್ಕುದಾದ ಪುರಸ್ಕಾರ ಇನ್ನೂ ಸಿಗುತ್ತಾ ಇಲ್ಲ ಎಂದು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿದ್ಯ ವಹಿಸಿ ಭಾನುವಾರ ಮಾತನಾಡಿದರು.

ಭಾರತೀಯ ಸಂಸ್ಕೃತಿಗೆ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಿದವರು ಆದಿ ಕವಿ ಮಹರ್ಷಿ ವಾಲ್ಮೀಕಿ, ಆದರೆ ಈವರೆಗೂ ಮಹರ್ಷಿ ವಾಲ್ಮೀಕಿಗೆ ಪ್ರತಿಭಾ ಪುರಸ್ಕಾರ ಸಿಕ್ಕಿಲ್ಲ ಎಂದರು. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಪ್ರತಿಭೆಗಳಿಗೆ ಪುರಸ್ಕಾರ ಸಿಗಲ್ಲ. ನಮ್ಮ ಪ್ರತಿಭೆಗಳಿಗೆ ನಾವು ಪುರಸ್ಕರಿಸಬೇಕು ಎಂದು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಪ್ರತಿಭೆ ಸಾಧಕರ ಸ್ವತ್ತೆ ಹೊರತು ಯಾರ ಸ್ವತ್ತಲ್ಲ, ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ, ಸಮಯ ಪ್ರಜ್ಞೆಯಿಂದ ರೂಡಿಸಿಕೊಂಡರೆ ಸಾಧನೆ ಸಾಧ್ಯ ಎಂದು ಶ್ರೀಗಳು ನುಡಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ಏಕಲವ್ಯ ರೀತಿ ಗುರಿ ಇರಲಿ, ಇಷ್ಟಪಟ್ಟು ಅಭ್ಯಾಸ ಮಾಡಿ, ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಸಾಗಿ ಎಂದು ಮಕ್ಕಳಿಗೆ ಸಲಹೆ ನೀಡಿದ ಅವರು, ಮಕ್ಕಳಿಗೆ ಒತ್ತಡ ಹೇರಬೇಡಿ ಎಂದು ಪೋಷಕರಿಗೆ ತಿಳಿಸಿದರು.

ಸ್ಥಳೀಯ ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ದುಶ್ಟಟಗಳಿಗೆ ದಾಸರಾಗಬೇಡಿ ಶಿಸ್ತು, ಸಂಸ್ಕಾರದಿಂದ ಜೀವನ ಮಾಡಿದರೆ ವಿದ್ಯಾವಂತರಾಗುತ್ತೀರಿ ಎಂದು ಹೇಳಿದರು.

ಹೊಸಪೇಟೆ ಡಿವೈಎಸ್ಪಿ ಟಿ.ಮಂಜುನಾಥ ಮಾತನಾಡಿ, ಜಾತಿ ನೋಡಿ ನೌಕರರನ್ನು ವರ್ಗಾವಣೆಗೊಳಿಸುವ ಕಾಲ ಬಂದಿದೆ ಎಂದ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಮೂಲಕ ಸಮಾಜ ಒಗ್ಗಟ್ಟು ಆಗಬೇಕು ಎಂದರು.

ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಅರಸೀಕೆರೆ ಅಣ್ಣಪ್ಪ, ನ್ಯಾಯವಾದಿ ಬಸವರಾಜ ಸಂಗಪ್ಪನವರ್‌, ದಾವಣಗೆರೆಯ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಹೊಸಪೇಟೆ ನಗರಸಭೆಯ ಪೌರಾಯುಕ್ತ ಎರಗುಡಿ ಶಿವಕುಮಾರ, ವಾಲ್ಮೀಕಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಿ ಶಿವಯೋಗಿ, ಜೈನ ಸಮಾಜದ ಮುಖಂಡ ಬಿ.ಪದ್ಮರಾಜ ಜೈನ್, ಶಿಕ್ಷಕರ ಸಂಘದ ಅಧ್ಯಕ್ಷ ಬಂದೋಳ ಸಿದ್ದಪ್ಪ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಪದ್ಮಲತಾ ಮಾತನಾಡಿದರು. ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾ.ಅಧ್ಯಕ್ಷ ಜಿ.ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಬಿಜೆಪಿ ಮುಖಂಡ ಆರ್.ಲೋಕೇಶ, ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ನಾಗರಾಜ, ಶಿಕ್ಷಕ ಬಿ.ರಾಜಶೇಖರ, ಖಲಂದರ, ಗುರುಪ್ರಸಾದ್, ಕಥೆಗಾರ ಮಂಜಣ್ಣ, ಸಂತೋಷಕುಮಾರ, ಎಚ್.ಟಿ. ಗಿರೀಶಪ್ಪ, ಪಿಎಸ್‌ಐ ನಾಗರತ್ನಮ್ಮ, ಗಿರಜ್ಜಿ ಮಂಜುನಾಥ, ಕಾಟಿ ಹನುಮಂತಪ್ಪ ಇತರರು ಇದ್ದರು.