ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿಭೆ ಯಾರ ಮನೆಯ ಸ್ವತ್ತಲ್ಲ. ಪ್ರತಿಭಾವಂತರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾಗಿದೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಲ್ಪತರು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸದಾ ಕನ್ನಡದ ನೆಲ, ಜಲ, ಭಾಷೆಯ ವಿಚಾರವಾಗಿ ಹೋರಾಟ ನಡೆಸುತ್ತಾ ಬಂದಿರುವ ಕನ್ನಡ ಪರ ಸಂಘಟನೆಗಳು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಅವರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷದ ವಿಚಾರ ಎಂದರು.
ಸುಮಾರು ೧೬ ಜಿಲ್ಲೆಗಳಿಗೆ ರಹದಾರಿ ಕಲ್ಪಿಸುವ ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಸದ ಜಿ.ಎಸ್. ಬಸವರಾಜು ಅವರ ಕೊಡುಗೆ ಅಪಾರ. ಅವರ ದೂರದೃಷ್ಟಿಯ ಫಲವಾಗಿ ತುಮಕೂರು ವರ್ಷದಿಂದ ವರ್ಷಕ್ಕೆ ದೊಡ್ಡದಾಗಿ ಬೆಳೆಯುತ್ತಿದೆ. ತುಮಕೂರು ನಗರ ಶಾಸಕರು ಸಹ ತುಮಕೂರು ಜಿಲ್ಲೆಯ ಬೆಳವಣಿಗೆಗೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ತುಮಕೂರು ಜಿಲ್ಲೆ ಶಾಂತಿ, ನೆಮ್ಮದಿಗೆ ಹೆಸರಾದ ಜಿಲ್ಲೆ. ಸಿದ್ಧಗಂಗಾ ಮಠದ ಡಾ. ಶ್ರೀಶಿವಕುಮಾರಸ್ವಾಮೀಜಿಗಳ ಕೃಪಾಶೀರ್ವಾ ದಿಂದ ಜಿಲ್ಲೆ ಇಡೀ ವಿಶ್ವದಲ್ಲಿಯೇ ಹೆಸರು ಮಾಡಿದೆ. ಹಾಗೆಯೇ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಸಹ ನಾಡಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ವಿ. ಸೋಮಣ್ಣ ತಿಳಿಸಿದರು.
ನಾನು ಸಹ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸುಮಾರು 45 ವರ್ಷಗಳಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ನಾಡಿನೆತ್ತರಕ್ಕೆ ಬೆಳೆದಿರುವ ಗಾಯಕ ಕಂಬದ ರಂಗಯ್ಯ ಒಳ್ಳೆಯ ಗಾಯಕ. ಮುಂದಿನ ನವೆಂಬರ್‌ನಲ್ಲಿ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವನ್ನ ಆಯೋಜಿಸುವ ಚಿಂತನೆ ಇದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಎಸ್. ನಾಗಣ್ಣ, ಕಲ್ಪತರು ಸಾಂಸ್ಕೃತಿಕ ವೇದಿಕೆವತಿಯಿಂದ ವಿದ್ಯಾ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾಗಿ ದುಡಿದಿರುವ ಡಾ. ಜಯರಾಮರಾವ್ ಅವರಿಗೆ 98 ವರ್ಷ. ಅಂತಹವರಿಗೆ ಸನ್ಮಾನಿಸುತ್ತಿರುವುದು ನಿಜಕ್ಕೂ ಕಲ್ಪತರು ಸಾಂಸ್ಕೃತಿಕ ವೇದಿಕೆ ಅಭಿನಂದನಾರ್ಹರು. ಹಾಗೆಯೇ ಶಿಕ್ಷಣ, ರಾಜಕೀಯ, ಸಮಾಜಸೇವೆ, ಸರ್ಕಾರಿ ಸೇವೆಯಲ್ಲಿರುವ ಹಿರಿಯರನ್ನು ಗುರುತಿಸಿ, ಸನ್ಮಾನಿಸುವ ಮೂಲಕ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು.
ವೇದಿಕೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್, ಧನಿಯಕುಮಾರ್, ತುಮಕೂರು ಜಿಲ್ಲಾ ಸಾಂಸ್ಕೃತಿಕ ಹಬ್ಬದ ಆಯೋಜಕರಾದ ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್, ರಾಜ್ಯ ಗೌರವ ಸಲಹೆಗಾರರಾದ ಡಾ.ಎಂ. ಸುದೀಪ್‌ಕುಮಾರ್, ವಿಜಯಸೇನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್. ಶಂಕರ್, ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ತುನುಜ್ ಕುಮಾರ್, ವಿಜಯಸೇನೆ ರಾಜ್ಯ ಕಾರ್ಯದರ್ಶಿ ರಂಜನ್ ಆರ್. ಮತ್ತಿತರರು ಉಪಸ್ಥಿತರಿದ್ದರು.BOX
ಕಲ್ಪತರು ಶ್ರೀ ಪ್ರಶಸ್ತಿ ಪ್ರದಾನಪತ್ರಕರ್ತರಾದ ಎಸ್. ನಾಗಣ್ಣ, ವಿದ್ಯಾನಿಕೇತನ ಸಂಸ್ಥಾಪಕ ಡಾ. ಜಯರಾಮ್‌ರಾವ್, ವಿದ್ಯಾವಾಹಿನಿ ಕಾರ್ಯದರ್ಶಿ ಕೆ.ಬಿ. ಜಯಣ್ಣ, ಮಾಜಿ ಶಾಸಕ ಹಾಗೂ ಎಚ್.ಎಂ.ಎಸ್. ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್. ಷಪಿಅಹಮದ್, ಕಲಾಶ್ರೀ ಡಾ.ಲಕ್ಷ್ಮಣದಾಸ್, ಟೂಡಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ವಿಜಯಸೇನೆ ರಾಜ್ಯ ಗೌರವ ಸಲಹೆಗಾರರಾದ ಡಾ. ಸುದೀಪ್ ಕುಮಾರ್ ಎಂ. ಅವರಿಗೆ ಕಲ್ಪತರು ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.