ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ವಿದ್ಯಾರ್ಥಿ ದಿಸೆಯಲ್ಲಿ ಸನ್ನಡತೆ ರೂಪಿಸಿಕೊಂಡು ಮಕ್ಕಳು ಭವಿಷ್ಯದ ಮಾದರಿ ಮಕ್ಕಳಾಗಿ ಬದುಕಬೇಕು ಎಂದು ಮೈಸೂರು ವಿವಿ ನಿವೃತ್ತ ಪ್ರೋ.ಎಂ.ಎಸ್. ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿ ಸುಬ್ಬರಾಯ ಛತ್ರದಲ್ಲಿ ವಿಪ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಗದು ಪ್ರೋತ್ಸಾಹಧನ ವಿತರಣೆಯಲ್ಲಿ ಮಾತನಾಡಿದರು.
ಓದಿನಷ್ಟೆ ನೈತಿಕ ಮೌಲ್ಯ ಮಕ್ಕಳಿಗೆ ಅಗತ್ಯ. ಇದರಲ್ಲಿ ವಿಪ್ರ ಸಮಾಜ ಜ್ಞಾನದಲ್ಲಿ ಮೇಲಾಗಿದ್ದು, ತಮ್ಮ ಸಮಾಜಕ್ಕೆ ಇದುವರೆವಿಗೂ ವಿಪ್ರ ಜಾತಿ ಪ್ರಮಾಣ ಪತ್ರ ಸರ್ಕಾರದಿಂದ ಸಿಗದಿರುವುದು ಬೇಸರಕರವಾಗಿದೆ ಎಂದರು.ಕಿಕ್ಕೇರಿ ಬಲು ದೊಡ್ಡ ಸಂಸ್ಕೃತಿಯ ತಾಣವಾಗಿದೆ. ಇಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಜ್ಞಾನ ಶಿಕ್ಷಣಕ್ಕೆ ನೆರವಾಗುವ ಕೆಲಸ ಸರ್ವ ಶ್ರೇಷ್ಟವಾಗಿದೆ. ವಿವಿಧ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳನ್ನು ಗುರ್ತಿಸಿ ನೆರವು ನೀಡುವ ಕೆಲಸ ನಿರಂತರವಾಗಿರಲಿ ಎಂದು ಆಶಿಸಿದರು.
ಎಸ್ಸೆಸ್ಸೆಲ್ಸಿಯಿಂದ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಡಿಗ್ರಿ, ಮೆಡಿಕಲ್, ಇಂಜಿನಿಯರಿಂಗ್ ಓದುತ್ತಿರುವ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಗೌರವಿಸಿ ಉತ್ತೇಜಿಸಲಾಯಿತು.ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳು ತಮ್ಮ ಓದಿನ ಅನುಭವ ಹಂಚಿಕೊಂಡರು. ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಮಾಜದ ಗಣ್ಯರಾದ ನಿವೃತ್ತ ಶಿಕ್ಷಕ ಎಸ್.ಜಿ.ಸತ್ಯನಾರಾಯಣ, ಪಂಚಮಿ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್. ಗೌರಿಶಂಕರ್, ಪಂಚಮಿ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಆನಂದಮೂರ್ತಿಅವರನ್ನು ಗೌರವಿಸಲಾಯಿತು.ಈ ವೇಳೆ ಜಿಲ್ಲಾ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ಎಸ್. ಶಂಕರನಾರಾಯಣಶಾಸ್ತ್ರೀ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅರವಿಂದ್ ಕಾರಂತ್, ಮೈಸೂರು ಹೊಯ್ಸಳ ಕರ್ನಾಟಕ ಸಂಘದ ಉಪಾಧ್ಯಕ್ಷೆ ಶ್ರೀಮತಿ, ಕಿಕ್ಕೇರಿ ಸಮಿತಿಕೆ.ಬಿ. ವೆಂಕಟೇಶ್, ಮಹಬಲ ಶರ್ಮ, ಕೆ.ಎಸ್. ಪರಮೇಶ್ವರಯ್ಯ, ಗಣೇಶ್‌ರಾವ್, ಕೆ.ಎಸ್. ಅನಂತಸ್ವಾಮಿ, ಸುರಭಿಶರ್ಮ ಮತ್ತಿತರರು ಇದ್ದರು.