ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಸಂಸದ ಸಂಸದ ಪ್ರತಾಪ ಸಿಂಹ ರಾಜ್ಯ ಸರ್ಕಾರವನ್ನು ತಾಲೀಬಾನ್ ಸರ್ಕಾರಕ್ಕೆ ಹೋಲಿಸಿದ್ದಾರೆ. ವಿರಾಜಪೇಟೆಯಲ್ಲಿ ಗುರುವಾರ ನಡೆದ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ‘ಕಾಂಗ್ರೆಸ್‌ಗೆ ಓಟ್ ಹಾಕಿದರೆ ತಾಲಿಬಾನ್ ಸರ್ಕಾರ ಬರುತ್ತದೆ’ ಎಂದು ಹೇಳಿದ್ದೆ. ಅದು ಕನ್ನಡಿಗರ ಸರ್ಕಾರ ಆಗಿರಲ್ಲ ಎಂದಿದ್ದೆ ಎಂದು ನೆನಪಿಸಿದರು.ಮೊನ್ನೆ ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಟ್ರಯಲ್ ಅಷ್ಟೇ. ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತದೆ. ಅದರ ಮೇಲೆ ಒಂದು ಲೌಡ್ ಸ್ಪೀಕರ್ ಬಂದು ಆಜಾನ್ ಕೇಳುತ್ತದೆ. ಕಾಂಗ್ರೆಸ್ ಸರ್ಕಾರ ಮುಂದುವರಿಯಲು ಬಿಟ್ಟರೆ ತಾಲಿಬಾನ್ ಸರ್ಕಾರ ಮಾಡುವ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ಕಿಡಿಕಾರಿದರು. ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿ ಸೋತಿರುವುದಕ್ಕೆ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲೇ ರಾಜ್ಯಸಭೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಹೊಂದಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಮಾಧ್ಯಮಗಳು ಪ್ರಪಂಚಕ್ಕೆ ತೋರಿಸಿವೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.ಅಶ್ವತ್ಥ್ ನಾರಾಯಣ್ ವಾಗ್ದಾಳಿ: ಪಾಕಿಸ್ತಾನ ಜಿಂದಾಬಾದ್ ಹೇಳಿಲ್ಲ ಎನ್ನುವ ಮೂಲಕ ಸುಳ್ಳನ್ನು ಸತ್ಯಮಾಡಲು ಹೊರಟ ಪಕ್ಷವೇ ಅದು ಕಾಂಗ್ರೆಸ್ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.ವಿರಾಜಪೇಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಮುಜುಗರದಲ್ಲಿ ಕಾಂಗ್ರೆಸ್ ಸಿಲುಕಿದ್ದು ಅದನ್ನ ಮರೆ ಮಾಚುವ ಪ್ರಯತ್ನ ನಡೆದಿದೆ. ಬೇರೆ ಬೇರೆ ಕಡೆ ಘೋಷಣೆ ಕೇಳುತ್ತಾ ಇದ್ದೆವು. ಆದರೆ ವಿಧಾನ ಸೌಧದಲ್ಲಿ ಕೇಳಿರುವ ಘೋಷಣೆಗೆ ಅವರ ಬಳಿ ಉತ್ತರ ಇಲ್ಲ. ಸರ್ಕಾರ ಇದರ ಜವಾಬ್ದಾರಿ ತೆಗೆದುಕೊಂಡು ಮುಖ್ಯಮಂತ್ರಿ ಸೇರಿ ಎಲ್ಲಾರೂ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.ಸರ್ಕಾರಕ್ಕೆ ಜಾತಿ ಜಾತಿಗಣತಿ ವರದಿ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಜಾತಿಗಣತಿ ಸರಿಯಾಗಿ ನಡೆದಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ವರದಿ ಸ್ವೀಕರಿಸಿದೆ. ಕಾಂಗ್ರೆಸ್ ನಾಯಕರಿಂದಲೇ ವರದಿಗೆ ವಿರೋಧವಿದೆ ಎಂದರು.ಎಲ್ಲಾ ವರ್ಗದ ಜನರಿಗೆ ಇದು ಒಪ್ಪಿಗೆ ಇಲ್ಲ. ಸರ್ಕಾರದ ನಡೆಯನ್ನು ಕಾದು ನೋಡುತ್ತೇವೆ. ಜಯಪ್ರಕಾಶ್ ಹೆಗ್ಡೆ ಈಗ ಯಾವ ಪಕ್ಷದಲ್ಲೂ ಇಲ್ಲ. ಮುಂದೆ ಅವರ ತೀರ್ಮಾನ ಹೇಗಿರುತ್ತೆ ನೋಡೋಣ ಎಂದು ಹೇಳಿದರು.