ಭಾವೈಕ್ಯತೆ ಸಂದೇಶ ಸಾರುತ್ತಿದೆ ತಾಳಿಕೋಟೆ

| Published : Oct 02 2024, 01:10 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಹೋಬಳಿ ಮಟ್ಟದ ಗ್ರಾಮವಾಗಿದ್ದ ತಾಳಿಕೋಟೆ ಇಂದು ಇತಿಹಾಸ ಪ್ರಸಿದ್ಧ ವಿದ್ಯಾಕೇಂದ್ರ, ವಾಣಿಜ್ಯ ಕೇಂದ್ರ, ಆಧ್ಯಾತ್ಮಿಕ, ಧಾರ್ಮಿಕ ಕೇಂದ್ರವಾಗಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಇಲ್ಲಿಯ ಮಠ, ಮಂದಿರ, ಮಸೀದಿ, ದರ್ಗಾಗಳು ಭಾವೈಕ್ಯತೆಯ ಸಂದೇಶ ಸಾರುತ್ತಿವೆ. ಡೋಣಿ ಬೆಳೆದರೆ ಓಣಿಯೆಲ್ಲ ಜೋಳ ಎಂಬ ನಾಣ್ಣುಡಿಯಂತೆ ಡೋಣಿ ನದಿ ಕಪ್ಪುಮಣ್ಣಿನ ಎರೆಭೂಮಿ ಅತ್ಯಂತ ಫಲವತ್ತಾದ ಪ್ರದೇಶ. ಹಿಡಿ ಬಿತ್ತಿದರೆ ಖಂಡುಗ ಬೆಳೆಯಬಲ್ಲ ಖ್ಯಾತಿ ತಾಳಿಕೋಟೆಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜಿ.ಎಂ.ಘೀವಾರಿ ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹೋಬಳಿ ಮಟ್ಟದ ಗ್ರಾಮವಾಗಿದ್ದ ತಾಳಿಕೋಟೆ ಇಂದು ಇತಿಹಾಸ ಪ್ರಸಿದ್ಧ ವಿದ್ಯಾಕೇಂದ್ರ, ವಾಣಿಜ್ಯ ಕೇಂದ್ರ, ಆಧ್ಯಾತ್ಮಿಕ, ಧಾರ್ಮಿಕ ಕೇಂದ್ರವಾಗಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಇಲ್ಲಿಯ ಮಠ, ಮಂದಿರ, ಮಸೀದಿ, ದರ್ಗಾಗಳು ಭಾವೈಕ್ಯತೆಯ ಸಂದೇಶ ಸಾರುತ್ತಿವೆ. ಡೋಣಿ ಬೆಳೆದರೆ ಓಣಿಯೆಲ್ಲ ಜೋಳ ಎಂಬ ನಾಣ್ಣುಡಿಯಂತೆ ಡೋಣಿ ನದಿ ಕಪ್ಪುಮಣ್ಣಿನ ಎರೆಭೂಮಿ ಅತ್ಯಂತ ಫಲವತ್ತಾದ ಪ್ರದೇಶ. ಹಿಡಿ ಬಿತ್ತಿದರೆ ಖಂಡುಗ ಬೆಳೆಯಬಲ್ಲ ಖ್ಯಾತಿ ತಾಳಿಕೋಟೆಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜಿ.ಎಂ.ಘೀವಾರಿ ನುಡಿದರು.

ಪಟ್ಟಣದಲ್ಲಿ ನಡೆದ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದರು. ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳ ಗರಡಿಯಲ್ಲಿ ಪಳಗಿದ ಆಧ್ಯಾತ್ಮಿಕ ಹುಲಿ ಶ್ರೀ ಖಾಸ್ಗತ ಶಿವಯೋಗಿಗಳು. ಅವರ ತಪೋಭೂಮಿ ಈ ನೆಲ. ೧೨ನೇ ಶತಮಾನದಲ್ಲಿ ಬಸವಾದಿ ಪ್ರಥಮರ ಜೊತೆಗೆ ತಾಳಿಕೋಟೆ ಭಾಗದ ಶರಣರಾದ ಬಾಹ್ಯರು ಬೊಮ್ಮಯ್ಯ, ಶಿವದೇವ ಮತ್ತು ಶಿಷ್ಯ ಪಾವನದೇವರಿಂದ ಮೊದಲಾಗಿ ಶರಣರ, ಸಂತರ, ಸೂಫಿಗಳ ನೆಲೆವೀಡಾಗಿದೆ. ಕೊಡೆಕಲ್ ಬಸವಣ್ಣ, ತಿಂಥಣಿ ಮೋನಪ್ಪಯ್ಯ, ಘನಮಠ ಶಿವಯೋಗಿಗಳು ಮೊದಲಾದವರು ನಡೆದಾಡಿದ ಪಾವನ ನೆಲವಾಗಿದೆ ಎಂದರು.

ವೀರವಿರಾಗಿ ಶ್ರೀ ಖಾಸ್ಗತ ಶಿವಯೋಗಿಗಳು ಸ್ವತಃ ಅನುಭಾವಿ ಕವಿಗಳು. ಸಿದ್ಧಲಿಂಗ ಅಂಕಿತದಲ್ಲಿ ಅನುಭಾವ ಗೀತಗಳನ್ನು ರಚಿಸಿದ್ದಲ್ಲದೆ, ಮಾರ್ಕೆಂಡೇಯ ಶಿವಾಧವ, ಮುಕ್ತಿ ಸೌಜ ಎನ್ನುವ ನಾಟಕಗಳನ್ನು, ಮುಕ್ತಿಸುವಿಚಾರದಂತಹ ತತ್ವ ಸಂವಾದ ಕೃತಿಗಳನ್ನೂ ರಚಿಸಿದ್ದಾರೆ. ಸ್ವತಃ ನಟರಾಗಿ ಹಾವಾಡಿಗ, ಬುಡಬುಡಕಿ, ಅರ್ಧನಾರೀಶ್ವರ, ಸುಂದರ ಯುವತಿ ಮೊದಲಾದ ವೇಷಗಳಲ್ಲಿ ಏಕಪಾತ್ರಾಭಿನಯ ಮಾಡಿದ್ದಾರೆ ಎಂದು ಹೇಳಿದರು.ಈ ಭಾಗದಲ್ಲಿ ಜನಪದ ಸಾಹಿತ್ಯದ ಶ್ರೀಮಂತಿಕೆ ಹೇರಳವಾಗಿದೆ. ಹಂತಿ ಹಾಡು, ಜೋಗುಳ ಪದ, ಲಾವಣಿ ಪದ, ಡೊಳ್ಳಿನ ಪದ, ಗರತಿ ಹಾಡು, ಕುಣಿತ, ವಾದ್ಯ ಸಂಗೀತ ಮಧುರವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕುವೆಂಪು, ಬೇಂದ್ರೆ, ಮಾಸ್ತಿ, ಡಿ.ವಿ.ಜಿ., ವಿ.ಕೃ.ಗೋಕಾಕ, ಕಾರಂತ, ಡಾ.ಫ.ಗು.ಹಳಕಟ್ಟಿ ಮೊದಲಾದ ದಿಗ್ಗಜ ಸಾಹಿತಿಗಳನ್ನು ಪಡೆದ ಸಾಹಿತ್ಯ ಪರಂಪರೆಯ ಕೊಂಡಿ ಕಳಚದಂತೆ ಉಳಿಸಿ, ಬೆಳೆಸಿ ಸಮೃದ್ಧಗೊಳಿಸುವ ಹೊಣೆಗಾರಿಕೆ ನಮ್ಮ ಹೊಸ ತಲೆಮಾರಿನ ಲೇಖಕರ ಮೇಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವುದರೊಂದಿಗೆ ಮನೆ ಮನೆಗಳಲ್ಲಿ ಕನ್ನಡ ಭಾಷೆಯ ಮಾತಾಗಬೇಕು. ಈ ಸಮ್ಮೇಳನದ ವ್ಯವಸ್ಥೆ ನೋಡಿದರೆ ಹೆಮ್ಮೆಯಾಗುತ್ತದೆ. ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಬಾರದು. ಕನ್ನಡ ಸಮ್ಮೇಳನಗಳು ಪ್ರತಿವರ್ಷ ಪ್ರತಿ ತಾಲೂಕಿನಲ್ಲಿ, ಶಾಲಾ ಮಟ್ಟದಲ್ಲಿ ಗ್ರಾಮದಲ್ಲಿ ನಡೆಯಬೇಕು, ಆ ಕಾರ್ಯಕ್ರಮದ ಉದ್ದೇಶ ಸಮಾಜದಲ್ಲಿನ ಪಿಡುಗುಗಳು, ಮೂಢನಂಬಿಕೆಗಳು ಹೋಗಲಾಡಬೇಕು. ಆ ನಾಡಿನಲ್ಲಿ ಸಾಮಾಜಿಕ ಬದಲಾವಣೆ ತರುವ ಕಾರ್ಯವಾಗಬೇಕು ಎಂದು ತಮ್ಮ ಮನದಿಚ್ಚೆ ವ್ಯಕ್ತಪಡಿಸಿದರು.

ನಮ್ಮ ಮನಸಿನ ಪರಿಸ್ಥಿತಿಗಳು ಎಲ್ಲಿಯವರೆಗೆ ಬದಲಾವಣೆಯಾಗುವುದಿಲ್ಲವೋ ಸಮಾಜ ಸರಿಯಾದ ದಿಕ್ಕಿನಲ್ಲಿ ಹೋಗಲು ಸಾಧ್ಯವಿಲ್ಲ. ನಮ್ಮ ಕನ್ನಡ ನಾಡು ಸಾಂಸ್ಕೃತಿಕ ಬೀಡು ಶರಣರ ನಾಡು, ಕುವೆಂಪು ಅವರ ನಾಡು, ಸಾಹಿತ್ಯಿಕ ನಾಡು ಎಂದು ಕರೆಯುತ್ತೇವೆ. ಇವೆಲ್ಲ ನಿಜವಾಗಬೇಕಾದರೆ ಸಮ್ಮೇಳನದ ಮುಖಾಂತರ ಬದಲಾವಣೆ ತರುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಕನ್ನಡದ ಅಭಿಮಾನ ಯಾವಾಗಲೂ ಈ ಭಾಗದಲ್ಲಿ ಕುಗ್ಗದಿರಲಿ, ಸಮ್ಮೇಳನ ಯಶಸ್ವಿಯ ಹಿಂದೆ ಸಾಕಷ್ಟು ಜನರ ಕೈಗಳಿವೆ. ಕನ್ನಡ ಜಾತ್ರೆ ಅಚ್ಚುಕಟ್ಟಾಗಿ ನಡೆದಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಕನ್ನಡದ ಭಾಷಾಭಿಮಾನ ಕೇವಲ ಮಾತಿನಲ್ಲಿ ಇರದೇ ನೆಲ, ಜಲ, ಕನ್ನಡ ಶಾಲೆಗಳ ಉಳಿವಿನಲ್ಲಿ ಇರಬೇಕಾಗಿದೆ. ಅಂತಹ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿದರು. ಹೂವಿನ ಹಿಪ್ಪರಗಿ ಪತ್ರಿಮಠದ ಶರಣೆ ದ್ರಾಕ್ಷಾಯಿಣಿ ಅಮ್ಮನವರು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯಮಟ್ಟದ ಸಮ್ಮೇಳನದ ರೀತಿಯಲ್ಲಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ವೇದಿಕೆಯ ಮೇಲೆ ಗುಂಡಕನಾಳ ಹಿರೇಮಠದ ಶ್ರೀ ಗುರಲಿಂಗ ಶಿವಾಚಾರ್ಯರು, ಕಲಕೇರಿಯ ಸಿದ್ದರಾಮ ಶಿವಾಚಾರ್ಯರು, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ ಶಕೀಲಹ್ಮದ ಖಾಜಿ, ತಹಸೀಲ್ದಾರ್‌ ಕೀರ್ತಿ ಚಾಲಕ, ಕಸಾಪ ಗೌರವಾಧ್ಯಕ್ಷ ಎಚ್.ಎಸ್.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಕಾಸೀಂ ಪಟೇಲ ಪಾಟೀಲ ಮೂಕೀಹಾಳ, ಎಸ್.ಬಿ.ಕಟ್ಟಿಮನಿ, ಸುಮಂಗಲಾ ಕೊಳೂರ, ತಾಪಂ ಇಓ ಎಸ್.ಎಸ್.ಮಸಳಿ, ಚಾಣಕ್ಯ ಅಕಾಡೆಮಿಯ ಮುಖ್ಯಸ್ಥ ಎನ್.ಎಂ.ಬಿರಾದಾರ, ಬರತಗೌಡ ಪಾಟೀಲ(ನಡಹಳ್ಳಿ) ಇದ್ದರು.

ಕರ್ನಾಟಕ ಸುವರ್ಣ ಸಂಭ್ರಮ ಹಿನ್ನಲೆ ೪೮ ಜನ ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಸಾಪ ತಾಲೂಕಾಧ್ಯಕ್ಷ ಆರ್.ಎಲ್.ಕೊಪ್ಪದ ಪ್ರಸ್ಥಾವಿಕ ಮಾತನಾಡಿದರು. ವಿರೇಶ ವಾಲಿ ತಂಡದವರಿಂದ ನಾಡಗೀತೆ, ರೈತಗೀತೆ, ಜರುಗಿದವು. ಆರ್.ಬಿ.ದಾನಿ ಸ್ವಾಗತಿಸಿದರು. ಎ.ಬಿ.ಇರಾಜ ನಿರೂಪಿಸಿದರು.

ಕೋಟ್‌

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ಮಾತು ಇಂದಿಗೂ ನಿಜವಾಗಿ ಜಾರಿಯಾಗಿಲ್ಲ. ಒಕ್ಕಲುತನ ಲಾಭದಾಯಕ, ಗೌರವದಾಯಕ ಉದ್ಯೋಗವಾಗಿ ಉಳಿದಿಲ್ಲ. ರೈತರ ಬದುಕು ಹಸನಾದಾಗ ದೇಶ ಸುಭಿಕ್ಷವಾದೀತು. ಇದೇ ಶರಣ ಸಂಸ್ಕೃತಿ, ಅತ್ಯಂತ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ, ಶಾಸ್ತ್ರೀಯ ಸ್ಥಾನಮಾನ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಹೆಗ್ಗಳಿಕೆ ಕನ್ನಡಕ್ಕಿದೆ.

ಡಾ.ಜಿ.ಎಂ.ಘೀವಾರಿ, ಸಮ್ಮೇಳನದ ಸರ್ವಾಧ್ಯಕ್ಷರು.

-------------------ಬಾಕ್ಸ್......

ಜಿಲ್ಲಾ ಸಮ್ಮೇಳನಕ್ಕೆ ಶಕ್ತಿ ಮೀರಿ ಸಹಕಾರ

ಕನ್ನಡದ ತಾಯಿ ಭುವನೇಶ್ವರಿ ತಾಯಿಯನ್ನು ಹೊತ್ತು ಮೆರೆಸುವ ಕಾರ್ಯ ತಾಲೂಕಿನ ಜನರು ಮಾಡಿದ್ದಾರೆ. ಕುವೆಂಪು ಹೇಳಿದಂತೆ ಭಾರಿಸು ಕನ್ನಡ ಡಿಂಡಿಂವಾ ಎನ್ನುವಂತೆ ಕನ್ನಡದ ಕಂಪು ತಾಲೂಕಿನಲ್ಲಿ ಹೆಚ್ಚಿಗೆ ಆಗಿದೆ ಎಂಬುದು ಕಾಣುತ್ತಿದೆ. ರಾಜ್ಯದಲ್ಲಿ ೮೭ ಸಮ್ಮೇಳನಗಳಾಗಿವೆ. ತಾಲೂಕಿನ ಹೆಡ್ ಕ್ವಾಟರ್ಸ್‌ಗೆ ಶಾಸಕ ಸಿ.ಎಸ್.ನಾಡಗೌಡರು ಆಗಿದ್ದರೆ ಈ ತಾಲೂಕಿನ ಅತೀ ಹೆಚ್ಚಿನ ಹಳ್ಳಿಗಳು ನನ್ನ ಕ್ಷೇತ್ರಕ್ಕೆ ಬರುತ್ತವೆ ಆದ ಕಾರಣದಿಂದ ಈ ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯ ಸಹಕಾರವನ್ನು ಒದಗಿಸಲು ಸಿದ್ದನಿದ್ದೇನೆ ಮತ್ತು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ನನ್ನ ಶಕ್ತಿ ಮೀರಿ ಕೈ ಜೋಡಿಸುವುದಾಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಭರವಸೆ ನೀಡಿದರು.