ಹಿರಿಯ ನಾಗರಿಕರ ಬಗ್ಗೆ ಕಾಳಜಿ ಆದ್ಯ ಕರ್ತವ್ಯ: ಸಿ.ನಾರಾಯಣಸ್ವಾಮಿ

| Published : Oct 02 2024, 01:10 AM IST

ಸಾರಾಂಶ

ಕುಂದಾಣ/ದೊಡ್ಡಬಳ್ಳಾಪುರ: ಪ್ರತಿಯೊಂದು ಮನೆಯಲ್ಲೂ ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಂಡು ಸಂತೋಷದ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಹೇಳಿದರು.

ಕುಂದಾಣ/ದೊಡ್ಡಬಳ್ಳಾಪುರ: ಪ್ರತಿಯೊಂದು ಮನೆಯಲ್ಲೂ ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಂಡು ಸಂತೋಷದ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಘನತೆಯ ಬಾಳಿನೊಂದಿಗೆ ವಯೋಪಕ್ವತೆ; ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಂದಿನ ದಿನಮಾನಗಳಲ್ಲಿ ನಗರೀಕರಣ ಬೆಳೆದಂತೆ ಕುಟುಂಬಗಳು ವಿಭಕ್ತವಾಗಿ ಹಿರಿಯರನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವುದು ಕಡಿಮೆಯಾಗುತ್ತಿದೆ. ಪ್ರತಿಯೊಂದು ಕುಟುಂಬದ ಕಿರಿಯರು ಹಿರಿಯರಿಗೆ ಮುಪ್ಪಾವಸ್ಥೆಯಲ್ಲಿ ಒಳ್ಳೆಯ ಆರೈಕೆ, ಪ್ರೀತಿ, ಗೌರವವನ್ನು ನೀಡುವುದು ಆದ್ಯ ಕರ್ತವ್ಯವಾಗಿದೆ. ಸಮಾಜದಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರನ್ನು ಗೌರವಿಸುವ ಪ್ರವೃತ್ತಿ ಹೆಚ್ಚಾಗಬೇಕು. ದೇವರು ವಿಶೇಷಚೇತನರಲ್ಲಿ ತನ್ನದೇಯಾದ ವಿಶಿಷ್ಟ ಕಲೆ, ಶಕ್ತಿ ನೀಡಿರುತ್ತಾನೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಾಧಕರನ್ನಾಗಿಸುವ ಕೆಲಸ ಮಾಡುವಂತಾಗಬೇಕಿದೆ ಎಂದರು.

5 ಸಾವಿರ ಊರುಗೋಲುಗಳ ವಿತರಣೆಗೆ ಕ್ರಮ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್, ಜಿಲ್ಲೆಯಲ್ಲಿ 5 ಸಾವಿರ ಊರುಗೋಲುಗಳನ್ನು ಹಿರಿಯ ನಾಗರಿಕರಿಗೆ ಹಂತ ಹಂತವಾಗಿ ವಿತರಿಸಲಾಗುವುದು. ಇದರಿಂದ ಹಿರಿಯ ನಾಗರಿಕರಿಗೆ ನಡೆದಾಡಲು ಸಹಾಯ ಕಲ್ಪಿಸಿದಂತಾಗುತ್ತದೆ. ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ಕುಂದು ಕೊರತೆಗಳನ್ನು ಪರಿಹರಿಸಲು ಜಿಲ್ಲಾಡಳಿತ ಸದಾ ಸಿದ್ಧವಿದೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೂ ನಿರಾಶ್ರಿತ ಹಿರಿಯ ನಾಗರಿಕರ ರಕ್ಷಣೆ, ಇಲಾಖೆಯ ಸಂಗಮ ಯೋಜನೆ ಹಾಗೂ ಹಿರಿಯ ನಾಗರಿಕರ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.

ಪಿಂಚಣಿ ಹೆಚ್ಚಳಕ್ಕೆ ಮನವಿ: ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ಈಗಿರುವ 1200 ರುಪಾಯಿಗಳ ಪಿಂಚಣಿ ಸೌಲಭ್ಯವನ್ನು 2000 ರುಪಾಯಿಗಳಿಗೆ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಆಶ್ವಾಸನೆ ನೀಡಿದರು.

ವಿವಿಧ ಸಾಧನ ಸಲಕರಣೆ ವಿತರಣೆ: ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಅಲಿಮ್ಕೊ ಸಂಸ್ಥೆಯ ವತಿಯಿಂದ ವಯೋಶ್ರೀ ಮತ್ತು ಅಡಿಪ್ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 235 ವಿಕಚೇತನರಿಗೆ (ವ್ಹೀಲ್‌ಚೇರ್, ಯಂತ್ರಚಾಲಿತ ವ್ಹೀಲ್ ಚೇರ್ ಕ್ರಸ್ರ್, ಕ್ಯಾಲಿಕ್ರಸ್ರ್, ವಾಕರ್, ಶ್ರವಣ ಸಾಧನ ಹಾಗೂ ಇತರೆ ಸಲಕರಣೆಗಳು) ಹಾಗೂ 182 ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ (ವ್ಹೀಲ್‌ಚೇರ್, ತ್ರಿಚಕ್ರ, ಕ್ರಸ್ರ್, ವಾಕರ್, ಶ್ರವಣ ಸಾಧನ ಹಾಗೂ ಇತರೆ ಸಲಕರಣೆಗಳು) ವಿತರಣೆ ಮಾಡಲಾಯಿತು.

ಸಾಧಕರಿಗೆ ಸನ್ಮಾನ: ಇದೇ ವೇಳೆ ಕ್ರೀಡೆ, ಪ್ರಬಂಧ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಅಭಿನಂದನಾ ಪತ್ರ ನೀಡಿ, ಸನ್ಮಾನಿಸಲಾಯಿತು.

ಸಭೆಯಲ್ಲಿ ಆಲೂರು ದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಪಿ.ಮುನಿರಾಜು, ಜಿಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಜಗದೀಶ್ ಎನ್.ಎಂ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನಿತಾಲಕ್ಷ್ಮೀ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.