ಅಡ್ಡೂರು- ಪೊಳಲಿ, ಉಳಾಯಿಬೆಟ್ಟು ಸೇತುವೆ ಧಾರಣಾ ಸಾಮರ್ಥ್ಯ ಹೆಚ್ಚಳ ಬಗ್ಗೆ ಮಾತುಕತೆ

| Published : Oct 30 2024, 12:35 AM IST

ಅಡ್ಡೂರು- ಪೊಳಲಿ, ಉಳಾಯಿಬೆಟ್ಟು ಸೇತುವೆ ಧಾರಣಾ ಸಾಮರ್ಥ್ಯ ಹೆಚ್ಚಳ ಬಗ್ಗೆ ಮಾತುಕತೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿತ ಭಾರಕ್ಕಿಂತ ಹೆಚ್ಚಿನ ಭಾರದ ಘನ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಘನ ವಾಹನ ಸಂಚಾರದ ಮೇಲೆ ನಿಗಾ ಇಡಲು ಪೊಳಲಿಯಲ್ಲಿ ಪೊಲೀಸ್ ಚೆಕ್-ಪೋಸ್ಟ್‌ಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಮಾತುಕತೆ ನಡೆಸಲಾಯಿತು ಎಂದು ಶಾಸಕ ರಾಜೇಶ್‌ ನಾಯ್ಕ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಅಡ್ಡೂರು- ಪೊಳಲಿ ಸೇತುವೆ ಮತ್ತು ಉಳಾಯಿಬೆಟ್ಟು ಕಿರು ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಎರಡೂ ಕಡೆ ಹೊಸ ಸೇತುವೆ ನಿರ್ಮಿಸುವ ಕುರಿತು ಮಂಗಳವಾರ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತುಕತೆ ನಡೆಸಿದರು.

ಎರಡೂ ಕಡೆ ಸೇತುವೆಯಲ್ಲಿ ಘನ ವಾಹನ ಸಂಚಾರ ಸ್ಥಗಿತದಿಂದ ಸಾರ್ವಜನಿಕ ಬಸ್ ಸಂಚಾರ ಮತ್ತು ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಇತ್ತೀಚೆಗೆ ಪೊಳಲಿ ಮತ್ತು ಉಳಾಯಿಬೆಟ್ಟಿನಲ್ಲಿ ಸೇತುವೆ ತಜ್ಞರು ನಡೆಸಿದ ಪರೀಕ್ಷೆ ವೇಳೆ ಎರಡೂ ಸೇತುವೆಗಳು ಶಿಥಿಲಗೊಂಡಿದೆ. ಸೇತುವೆಗಳ ಧಾರಣಾ ಶಕ್ತಿ ಹೆಚ್ಚಿಸುವ ಹಾಗೂ ಹೊಸ ಸೇತುವೆ ನಿರ್ಮಾಣದ ಕುರಿತು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕದ್ವಯರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರೊಂದಿಗೆ ಮಾತುಕತೆ ನಡೆಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಎಂಜಿನಿಯರ್‌ಗಳು ಹಾಗೂ ಎರಡೂ ಕಡೆಯ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ, ಪೊಳಲಿ ಸೇತುವೆಯ ಧಾರಣಾ ಶಕ್ತಿ ಹೆಚ್ಚಿಸಲು ೬ ಕೋಟಿ ರು. ಹಾಗೂ ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು ೫೦ ಕೋಟಿ ರು. ತಗುಲಲಿದೆ. ಉಳಾಯಿಬೆಟ್ಟಿನಲ್ಲಿ ಹೊಸ ಕಿರು ಸೇತುವೆ ನಿರ್ಮಾಣಕ್ಕೆ ೫ ಕೋಟಿ ರು. ತಗುಲಲಿದೆ. ಪೊಳಲಿಯಲ್ಲಿ ಮೊದಲಿಗೆ ಸೇತುವೆ ಧಾರಣಾ ಶಕ್ತಿ ಹೆಚ್ಚಿಸುವ ಕಾಮಗಾರಿ ನಡೆಯಲಿದೆ. ಮಾತುಕತೆ ಫಲಪ್ರದವಾದಲ್ಲಿ ಎರಡೂ ಕಡೆ ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.ಪ್ರಸಕ್ತ ಮಾತುಕತೆ ಬಗ್ಗೆ ಶೀಘ್ರವೇ ತಾನು ಮತ್ತು ರಾಜೇಶ್ ನಾಯ್ಕ್ ಅವರು, ಸರ್ಕಾರದ ಜೊತೆ ಮಾತುಕತೆ ನಡೆಸಿ ಕಾಮಗಾರಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಚರ್ಚಿಸಲಿದ್ದೇವೆ ಎಂದ ಅವರು, ಸೇತುವೆ ಧಾರಣಾ ಶಕ್ತಿ ಹೆಚ್ಚಿಸಿದ ಬಳಿಕ ಸಾರ್ವಜನಿಕ ಬಸ್‌ಗಳು ಮತ್ತು ಶಾಲಾ-ಕಾಲೇಜು ಬಸ್‌ಗಳು ಯಥಾವತ್ತಾಗಿ ಸಂಚರಿಸಲು ಸಾಧ್ಯವಾಗುತ್ತದೆ.

ಆದರೆ ನಿಗದಿತ ಭಾರಕ್ಕಿಂತ ಹೆಚ್ಚಿನ ಭಾರದ ಘನ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಘನ ವಾಹನ ಸಂಚಾರದ ಮೇಲೆ ನಿಗಾ ಇಡಲು ಪೊಳಲಿಯಲ್ಲಿ ಪೊಲೀಸ್ ಚೆಕ್-ಪೋಸ್ಟ್‌ಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಮಾತುಕತೆ ನಡೆಸಲಾಯಿತು ಎಂದರು.

ಈ ಸಂದರ್ಭದಲ್ಲಿ ಫಲ್ಗುಣಿ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ವೆಂಕಟೇಶ್‌ ನಾವಡ, ಜಯರಾಮ ಕೃಷ್ಣ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ, ಕಿಶೋರ್‌ ಪಲ್ಲಿಪಾಡಿ, ಸುಖೇಶ್‌ ಚೌಟ, ಚಂದ್ರಶೇಖರ್‌ ಶೆಟ್ಟಿ ಮೊದಲಾದವರಿದ್ದರು.