ಕೆಟ್ಟು ಹೋದ ಟ್ರಾನ್ಸ್ಫಾರ್ಮರ್ ಗಳನ್ನು ದುರಸ್ತಿಪಡಿಸಬೇಕು, ಜೊತು ಬಿದ್ದಿರುವ ತಂತಿಗಳನ್ನ ಸರಿಪಡಿಸುವುದು

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಜಮೀನುಗಳಿಗೆ ನೀರು ಹರಿಸಲು ಪಂಪ್ ಸೆಟ್ ಗಳಿಗೆ ಹಗಲು ವೇಳೆಯಲ್ಲಿ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದಿಂದ ಪಟ್ಟಣದ ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಮುಂದೆ ರೈತರು ಪ್ರತಿಭಟಿಸಿದರು.ತಾಲೂಕು ರೈತ ಸಂಘದ ಸಹಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ತಾಲೂಕಿನ ಕಾಡಂಚಿನ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳಿಗೆ ನೀರು ಹರಿಸಲು ಹೋಗಿ ಕಾಡು ಪ್ರಾಣಿಗಳ ಬಾಯಿಗೆ ಆಹಾರವಾಗುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ, ಪಂಪ್ ಸೆಟ್ ಗಳಿಗೆ ಹಗಲು ವೇಳೆಯೇ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.ತಾಲೂಕಿನಾದ್ಯಂತ ರಾತ್ರಿ ವೇಳೆ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುತ್ತಿದ್ದು, ಆನೆ, ಹುಲಿ, ಚಿರತೆ ಹಾವಳಿ ಹೆಚ್ಚಾಗಿದ್ದು, ತಾಲೂಕಿನಲ್ಲಿ ನಾಲ್ವರ ಮೇಲೆ ಹುಲಿ ದಾಳಿ ಮಾಡಿ ಮೂವರು ಮೃತಪಟ್ಟಿದ್ದಾರೆ. ಇದರಿಂದಾಗಿ ರೈತರು ರಾತ್ರಿ ಜಮೀನಿಗೆ ತೆರಳಲು ಭಯಭೀತರಾಗಿದ್ದಾರೆ ಎಂದು ಅಳಲು ತೋಡಿಕೊಂಡರು.ಕೆಟ್ಟು ಹೋದ ಟ್ರಾನ್ಸ್ಫಾರ್ಮರ್ ಗಳನ್ನು ದುರಸ್ತಿಪಡಿಸಬೇಕು, ಜೊತು ಬಿದ್ದಿರುವ ತಂತಿಗಳನ್ನ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾತನಾಡಿ, 25 ಕೆವಿ ಟ್ರಾನ್ಸ್ಫಾರ್ಮರ್ಸಂಪರ್ಕದಲ್ಲಿ ಪಂಪ್ ಸೆಟ್ ಗಳು ಹೆಚ್ಚಾಗಿರುವುದರಿಂದ, 63 ಕೆವಿ ಟಿಸಿಯನ್ನು ಅಳವಡಿಸಬೇಕು ಎಂದರು.ರೈತರ ಮನವಿ ಸ್ವೀಕರಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದುಕುಮಾರ್ ಮಾತನಾಡಿ, ಬೆಳಗಿನ ವೇಳೆ ಪಂಪ್ಸೆಟ್ ಗಳಿಗೆ ವಿದ್ಯುತ್ ನೀಡಿದರೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಸದ್ಯಕ್ಕೆ ರಾತ್ರಿ ವೇಳೆ ವಿದ್ಯುತ್ ನೀಡಲಾಗುತ್ತಿದೆ, ಆದ್ದರಿಂದ ರೈತರು ಸಹಕರಿಸಿ ಎಂದು ಹೇಳಿದರು.ಸೆಸ್ಕ್ಅಧಿಕಾರಿಗಳಾದ ಅರುಣ್ ಕುಮಾರ್, ವಾದಿರಾಜ್, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಪಳನಿಸ್ವಾಮಿ, ತಾಲೂಕು ಮಾಜಿ ಅಧ್ಯಕ್ಷ ರವಿಕುಮಾರ್, ಮಹದೇವ, ಮಂಜು, ಗೋವಿಂದೇಗೌಡ, ದೇವಮ್ಮ, ಶಿವಲಿಂಗೇಗೌಡ, ಮಾದೇವಶೆಟ್ಟಿ, ಶಿವಣ್ಣಶೆಟ್ಟಿ, ಪುಟ್ಟರಾಜು, ರವಿ, ವೆಂಕಟೇಗೌಡ, ಪ್ರಸಾದ್, ಕುಮಾರಸ್ವಾಮಿ ಭಾಗವಹಿಸಿದ್ದರು.