ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಜಗತ್ತಿನಲ್ಲಿ ಶಿಕ್ಷಕರನ್ನು ಗುರು ಎಂದು ಗೌರವಿಸಲಾಗುತ್ತದೆ. ಆದರೆ, ಶಿಕ್ಷಕರನ್ನು ದೇವರೆಂದು ಗುರುತಿಸಿರುವುದು ಪ್ರಪಂಚದಲ್ಲಿ ಇಂಡಿ ತಾಲೂಕು ಎಂಬುವುದು ಅಭಿಮಾನದ ಸಂಗತಿ. ಅಥರ್ಗಾ ಗ್ರಾಮದಲ್ಲಿ ಶಿಕ್ಷಕ ರೇವಣಸಿದ್ದಪ್ಪ ಮಾಸ್ತರ್ ಹೆಸರಿನಲ್ಲಿ ಗ್ರಾಮಸ್ಥರು ದೇವಾಲಯ ನಿರ್ಮಿಸಿ ಪ್ರತಿವರ್ಷ ಜಾತ್ರೆ ಮಾಡುತ್ತಿರುವುದು ಶಿಕ್ಷಕ ಬಳಗಕ್ಕೆ ಹೆಮ್ಮೆಯ ವಿಷಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಮ್ಮಿಕೊಂಡ ಸರ್ವಪಲ್ಲಿ ರಾಧಾಕೃಷ್ಣ ಜಯಂತಿ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ ಬದಲಾವಣೆ ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಿದರೆ ಮಕ್ಕಳು ಮುಂದೆ ಸಾಧನೆ ಮಾಡಲು ಸಾಧ್ಯ. ರಾಧಾಕೃಷ್ಣನಂತಹ ನಾಯಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಧಾಕೃಷ್ಣರ ಆದರ್ಶ, ಸರಳ ಬದುಕು ನಮಗೆಲ್ಲ ಮಾದರಿಯಾಗಿದೆ ಎಂದರು.ಕಾತ್ರಾಳ ಬಾಳಗಾಂವದ ಗುರುದೇವಾಶ್ರಮದ ಡಾ.ಅಮೃತಾನಂದ ಶ್ರೀಗಳು ಆಶೀರ್ವಚನ ನೀಡಿ, ಶಿಕ್ಷಕನ ಸ್ಥಾನ ಬಹಳ ದೊಡ್ಡದಿದೆ. ಹಣ, ಅಧಿಕಾರ, ಪ್ರಶಸ್ತಿಯಿಂದ ವ್ಯಕ್ತಿ ದೊಡ್ಡವನಾಗುವುದಿಲ್ಲ. ನಾವು ಬದುಕುವ ರೀತಿ ನಮ್ಮನ್ನು ದೊಡ್ಡವರನ್ನಾಗಿ ಮಾಡುತ್ತದೆ. ಅದನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. ಸರ್ಕಾರ ನಿಡುವ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸದ ಸಿದ್ದೇಶ್ವರ ಶ್ರೀಗಳ ಸರಳ, ಅಧ್ಯಾತ್ಮಿಕ ಬದುಕಿಗೆ ನಾಡು ಪ್ರೀತಿಸುತ್ತದೆ, ಆರಾಧಿಸುತ್ತದೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ಕಲಿಸಿದ ಗುರುವನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ಗುರುಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಜಗತ್ತಿನ ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾಗಿದೆ. ಶಿಕ್ಷಕರ ನಡೆ, ನುಡಿ, ಆಚಾರ, ವಿಚಾರ ವಿದ್ಯಾರ್ಥಿಗಳು ಆಲಿಸುತ್ತಾರೆ. ಹೀಗಾಗಿ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಬಿಇಒ ಟಿ.ಎಸ್.ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದರಾಮೇಶ್ವರ ಶ್ರೀ ಹಾಗೂ ಬಸವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ, ಸುಜಾತಾ ಪೂಜಾರಿ, ಎನ್.ಎಂ.ಕಾಳೆ, ಎಸ್.ಡಿ.ಬಿರಾದಾರ, ಎ.ಎಸ್.ಬಿರಾದಾರ, ಅಲ್ಲಾಭಕ್ಷ ವಾಲಿಕಾರ, ಜಾವೀದ್ ಮೋಮಿನ, ಭೀಮಣ್ಣ ಕವಲಗಿ, ಎಸ್.ವಿ.ಹರಳಯ್ಯಡಿ.ಎಸ್.ಚಾಂದಕವಟೆ, ಪ್ರಕಾಶ ಐರೋಡಗಿ, ಎ.ಒ.ಹೂಗಾರ, ಕಾಂತು ಇಂಡಿ, ವಿ.ಜಿ.ಕಲ್ಮನಿ, ಆರ್.ವಿ.ಪಾಟೀಲ, ಬಸವರಾಜ ಗೊರನಾಳ, ಜಿ.ಜಿ.ಬರಡೋಲ, ಆಂಜನೇಯಸ್ವಾಮಿ ಹೊಸಮನಿ, ಸಂತೋಷ ಬಂಡೆ, ಎಚ್.ಎಂ.ಬಿಳೂರ, ದಶರಥ ಕೊರೆ, ಜಯರಾಮ ಚವ್ಹಾಣ, ಚಂದ್ರಶೇಖರ ದಶವಂತ, ವೈ.ಜಿ.ಬಿರಾದಾರ, ಜೆ.ಎಸ್.ದೇವರಮನಿ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ ದಿ.ವಿಠಲಗೌಡ ಪಾಟೀಲ ಸ್ಮರಣಾರ್ಥ ಶಿಕ್ಷಕರಿಗೆ ನೀಡುವ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.