ಸಾರಾಂಶ
ಮಂಜುನಾಥ ಕೆ.ಎಂ
ಸಿರುಗುಪ್ಪ: ಭತ್ತದ ಸಮೃದ್ಧಿಯ ಸಿರಿ ಎಂದೇ ಪ್ರಸಿದ್ಧಿಗೊಂಡ ಗಣಿನಾಡು ಬಳ್ಳಾರಿ ಜಿಲ್ಲೆಯ ಗಡಿ ತಾಲೂಕು ಸಿರುಗುಪ್ಪದಲ್ಲಿ ಫೆ.15ರಂದು ಕನ್ನಡ ಸಾಹಿತ್ಯ ಪರಿಷತ್ 7ನೇ ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಕನ್ನಡದ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ.ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಸಿರುಗುಪ್ಪ ತಾಲೂಕು ಘಟಕದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡ ಭಾಷಾ ಪ್ರಿಯರು ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡದ ತೇರು ಎಳೆಯಲು ಜಿಲ್ಲೆಯ ಸಾಹಿತ್ಯಪ್ರಿಯರು, ಕನ್ನಡಾಭಿಮಾನಿಗಳು ಸೇರಿದಂತೆ ಗಡಿನಾಡು ಹಾಗೂ ಆಂಧ್ರಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಹ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ.ಶಾಸಕರಿಂದ ಸಮ್ಮೇಳನಕ್ಕೆ ಚಾಲನೆ: ಸಿರುಗಪ್ಪ ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಲ್ಲಿ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಿಸಲಾಗಿದೆ. ಫೆ.15ರಂದು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ತಿನ ಧ್ವಜಾರೋಹಣ ನೆರವೇರಲಿದೆ. ಬಳಿಕ ಕನ್ನಡ ನಾಡದೇವಿ ಭುವನೇಶ್ವರಿಯ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಪ್ಯಾಟಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಸಾಹಿತ್ಯ ಸಮ್ಮೇಳನ ವೇದಿಕೆಯಿರುವ ಅಭಯಾಂಜನೇಯ ದೇವಸ್ಥಾನದವರೆಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡು ಮೆರುಗು ನೀಡಲಿವೆ.
ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಸಮ್ಮೇಳನಕ್ಕೆ ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಚಾಲನೆ ನೀಡುವರು. ಸಿರುಗುಪ್ಪ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಪ್ರಾಸ್ತಾವಿಕ ಮಾತನಾಡುವರು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಆಶಯ ನುಡಿಗಳನ್ನಾಡುವರು. ಚಂದನವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮ ಖ್ಯಾತಿಯ ನಾ.ಮ. ಸೋಮೇಶ್ವರ, ಸಿರುಗುಪ್ಪ ತಹಸೀಲ್ದಾರ್ ಎಚ್.ವಿಶ್ವನಾಥ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹುಲಿಕಟ್ಟೆ ಚನ್ನಬಸಪ್ಪ ಸೇರಿದಂತೆ ಅನೇಕರು ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಮ್ಮೇಳನದ ಸರ್ವಾಧ್ಯಕ್ಷ ಶಿವಕುಮಾರ್ ಎಸ್.ಬಳಿಗಾರ ಅಧ್ಯಕ್ಷತೆ ವಹಿಸುವರು.ಕವಿಗೋಷ್ಠಿ, ಸಾಹಿತ್ಯಗೋಷ್ಠಿಗಳು: ಸಮ್ಮೇಳನದ ಉದ್ಘಾಟನೆ ಸಮಾರಂಭದ ಬಳಿಕ ಸಾಹಿತ್ಯ ಗೋಷ್ಠಿಗಳು ಶುರುವಾಗಲಿವೆ. ಕನ್ನಡ ಸಾಹಿತ್ಯಕ್ಕೆ ಸಿರುಗುಪ್ಪ ತಾಲೂಕಿನ ಕೊಡುಗೆ ಕುರಿತು ಉಪನ್ಯಾಸ ಕೆ.ಗಾದಿಲಿಂಗಪ್ಪ ವಿಚಾರ ಮಂಡಿಸುವರು. ಸಿರುಗುಪ್ಪ ತಾಲೂಕಿನ ಜಾನಪದ ಸೊಗಸು ಕುರಿತು ಸಾಹಿತಿ ನಾ.ಮ. ಮರುಳಾರಾಧ್ಯ ಹಾಗೂ ಸಿರುಗುಪ್ಪ ತಾಲೂಕಿನ ಐತಿಹಾಸಿಕ ಮಹತ್ವ ಕುರಿತು ಬಿ.ಚಂದ್ರಶೇಖರ ವಿಚಾರ ಮಂಡಿಸುವರು. ಬಳಿಕ ಜರುಗುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕ ಡಾ.ದಸ್ತಗೀರಸಾಬ್ ದಿನ್ನಿ ವಹಿಸಲಿದ್ದಾರೆ. ಜಿಲ್ಲೆಯ ಕವಿಗಳಾದ ಕುರುವಳ್ಳಿ ತಿಮ್ಮಯ್ಯ, ಅರ್ಪಿತಾ ಕುಲಕರ್ಣಿ, ಮರೇಗೌಡ ಶಾರದಾ ಪತ್ತಾರ, ಆರ್.ಪಿ. ಮಂಜುನಾಥ, ಉಷಾ ದಳವಾಯಿ, ಪರಶುರಾಮ, ಬಸಮ್ಮ ಹಿರೇಮಠ, ಎನ್.ಎಲ್.ಲಕ್ಷ್ಮಣ ಸೇರಿದಂತೆ 20ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುವರು. ಸಂಜೆ ಜರುಗುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್ ಭಾಗವಹಿಸಿ, ಸಮಾರೋಪ ಭಾಷಣ ಮಾಡುವರು. ಡಾ.ಮಧುಸೂದನ್ ಕಾರಿಗನೂರು ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಟಿ.ಎಂ. ಚಂದ್ರಶೇಖರಯ್ಯ, ಚೊಕ್ಕಬಸವನಗೌಡ ಮತ್ತಿತರರ ಗಣ್ಯರು ಸಮಾರೋಪದಲ್ಲಿ ಪಾಲ್ಗೊಳ್ಳವರು. ಇದೇ ವೇಳೆ ರೈತ ಹೋರಾಟಗಾರ ಜಿ.ಪುರುಷೋತ್ತಮಗೌಡ, ಆಂಧ್ರಪ್ರದೇಶದ ಆದೋನಿಯ ಲಕ್ಷ್ಮಿ ನರಸಮ್ಮ, ವಂದವಾಗಲಿ ಪೊಂಪಯ್ಯಸ್ವಾಮಿ, ಹನುವಾಳು ಗಿಡ್ಡಯ್ಯ, ಹೊಳಗುಂದ ಜಿ.ದೊಡ್ಡಬಸಪ್ಪ, ಬದನೆಹಾಳ್ ಆರ್.ವೀರಭದ್ರಗೌಡ, ಹರಿವಾಣದ ಯು.ಶ್ರೀನಿವಾಸಮೂರ್ತಿ, ಬ್ರಹ್ಮಯ್ಯಾಚಾರ್, ರಾಜಾ ಪಂಪನಗೌಡ, ನರಸಿಂಹ ಆಚಾರ್ಯ ಅವರಿಗೆ ಸನ್ಮಾನಿಸಲಾಗುವುದು. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮ್ಮೇಳನ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರಕಾಶಕರಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಮ್ಮೇಳನ ಅಧ್ಯಕ್ಷರ ಪರಿಚಯ: ಕನ್ನಡ ಸಾಹಿತ್ಯ ಹಾಗೂ ಅಪ್ಪಟ ಭಾಷಾ ಪ್ರೇಮಿಯಾಗಿರುವ ಶಿವಕುಮಾರ್ ಎಸ್.ಬಳಿಗಾರ ಮೂಲತಃ ಬಾಗಲಕೋಟೆ ಜಿಲ್ಲೆಯವರು. 1974ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಕಾಂ ಪದವಿ ಪಡೆದಿದ್ದಾರೆ. 1975ರಲ್ಲಿ ಸಿರುಗುಪ್ಪ ನಗರದ ವಿಕೆಜಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 2013ರಲ್ಲಿ ವಯೋ ನಿವೃತ್ತಿಯಾಗಿದ್ದಾರೆ. ಶಿವಕುಮಾರ್ ಎಸ್.ಬಳಿಗಾರ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೈಂಕರ್ಯದ ಜೊತೆಗೆ ಆಂಧ್ರಪ್ರದೇಶದ ಗಡಿ ತಾಲೂಕು ಸಿರುಗುಪ್ಪದಲ್ಲಿ ಕನ್ನಡದ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. "ಸಾರ್ಥಕ ಬದುಕಿಗೆ ಬಸವ ದೀಪ್ತಿ " ಹಾಗೂ "ವಚನ ಚಿಂತನೆಯ ವಿಭಿನ್ನ ನೆಲೆಗಳು " ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ನಿವೃತ್ತಿಯ ಬಳಿಕವೂ ಇವರ ಕನ್ನಡ ಭಾಷಾಭಿಮಾನ ಹಾಗೂ ಕನ್ನಡ ಕಟ್ಟುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ವಿತ್ವದ ಶಿವಕುಮಾರ್ ಎಸ್.ಬಳಿಗಾರ ಅವರ ಸಾಹಿತ್ಯ ಕೃಷಿ ಹಾಗೂ ಕನ್ನಡ ಕಟ್ಟುವ ಕೆಲಸವನ್ನು ಗುರುತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಸಿರುಗಪ್ಪ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದೆ.ಸಿರುಗುಪ್ಪ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶದ ಅನೇಕ ಊರುಗಳಿಂದ ಕನ್ನಡಪ್ರಿಯರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡುವೆ ಎನ್ನುತ್ತಾರೆ ಸಿರುಗುಪ್ಪ ಕಸಾಪ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು.
;Resize=(128,128))
;Resize=(128,128))
;Resize=(128,128))
;Resize=(128,128))