ಸಾಹಿತ್ಯ ಸಮ್ಮೇಳನಗಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಮಹತ್ವದ ವೇದಿಕೆಗಳು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಾಹಿತ್ಯ ಸಮ್ಮೇಳನಗಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಮಹತ್ವದ ವೇದಿಕೆಗಳು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ ತಾಲೂಕು ಹಾಗೂ ಕಸಬಾ ಹೋಬಳಿ ಘಟಕದ ಆಶ್ರಯದಲ್ಲಿ ಫೆ.೯ರಂದು ಐಗೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲ ಕನ್ನಡ ಮನಸ್ಸುಗಳು ಒಂದಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಮ್ಮೇಳನಗಳು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಜೊತೆಗೆ ಜನರಲ್ಲಿ ಭಾಷಾಭಿಮಾನವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿವಿಧ ಸಮಿತಿಗಳು ನಿಸ್ವಾರ್ಥವಾಗಿ ಶ್ರಮಿಸುತ್ತಿವೆ. ಸಮ್ಮೇಳನದ ಪ್ರತಿಯೊಂದು ಹಂತದಲ್ಲೂ ಸಂಘಟಿತ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ದಾನಿಗಳ ಸಹಕಾರ ಹಾಗೂ ಸಾರ್ವಜನಿಕರ ಬೆಂಬಲವೇ ಸಮ್ಮೇಳನದ ಬಲ ಎಂದರು.ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಗೆ ಮನಸ್ಸು ಮಾಡಿರುವ ದಾನಿಗಳು ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳು ನೀಡುತ್ತಿರುವ ಸಹಾಯದಿಂದಲೇ ಕನ್ನಡ ಕಾರ್ಯಕ್ರಮಗಳು ಸಾಧ್ಯವಾಗುತ್ತಿವೆ ಎಂದು ಅವರು ಶ್ಲಾಘಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬ ಕನ್ನಡಿಗನ ಸಹಕಾರ ಅಗತ್ಯ. ಗ್ರಾಮೀಣ ಭಾಗದಲ್ಲಿ ನಡೆಯುವ ಸಾಹಿತ್ಯ ಹಬ್ಬ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಹೊಸ ಚೈತನ್ಯ ನೀಡಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ, ಕಸಬಾ ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಬಿಇಒ ಕೃಷ್ಣಪ್ಪ ಹಾಗೂ ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.