ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಯೋಗವು ಪ್ರಾಚೀನ ಕಾಲದಲ್ಲಿಯೇ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ರಾಜು ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯ ಆವರಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿ, ನಿತ್ಯ ಜೀವನದಲ್ಲಿ ನಾವು ಯೋಗ ಅಳವಡಿಸಿಕೊಂಡರೆ ನಮ್ಮ ದೇಹಕ್ಕೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು.

ನಮ್ಮ ದೇಹವು ಹಗುರವಾದ ಅನುಭವವಾಗುತ್ತದೆ ಯಾವುದೇ ರೋಗ ತಡೆಯುವ ಶಕ್ತಿ ಹಾಗೂ ಗುಣಪಡಿಸುವ ಶಕ್ತಿ ಹೊಂದಿರುವ ಏಕೈಕ ಮಾರ್ಗವೆಂದರೆ ಅದು ಯೋಗ ಮಾತ್ರ. ಘಟಾನುಘಟಿ ಕಾಯಿಲೆಗಳನ್ನು ಗುಣಪಡಿಸುವ ಅದ್ಭುತವಾದ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಮಕ್ಕಳಿಗೆ ಇಂದಿನಿಂದಲೇ ಯೋಗ್ಯ ಅಭ್ಯಾಸ ಮಾಡಿಸಿ ಆಗ ನಿಮ್ಮ ಕುಟುಂಬದ ಹತ್ತಿರ ಯಾವ ರೋಗವು ಸುಳಿಯುವುದಿಲ್ಲ. ಯೋಗಕ್ಕೆ ಪುರಾತನ ಇತಿಹಾಸವಿದೆ ಎಂದರು.

ಯೋಗ ಮಾಡುವುದರಿಂದ ದೇಹದ ಅಲಸ್ಯ ದೂರವಾಗುತ್ತದೆ. ಅಲ್ಲದೆ ಚಟುವಟಿಕೆಯಿಂದ ಕೂಡಿರುತ್ತದೆ. ನವ ಉಲ್ಲಾಸವನ್ನು ನೀವು ಕಂಡುಕೊಳ್ಳಬಹುದು. ಪ್ರಮುಖವಾಗಿ ಮನುಷ್ಯನ ಈ ದೈನಂದಿನ ಚಟುವಟಿಕೆಯ ಒತ್ತಡ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನ ಖಿನ್ನತೆ ನಿವಾರಣೆ ಮಾಡುವಲ್ಲಿ ಯೋಗವು ಪ್ರಭಾವಶಾಲಿಯಾಗಿ ಕೆಲಸ ಮಾಡಬಲ್ಲದು ಎಂಬುದನ್ನು ಈಗಾಗಲೇ ಡಬ್ಲ್ಯೂಎಚ್ಒ ಅಂಗೀಕರಿಸಿದೆ ಎಂದರು.


ಈ ವೇಳೆ ಒಂದನೇ ಹೆಚ್ಚುವರಿ ನ್ಯಾಯಾಧೀಶೆ ಶ್ರೀವಿದ್ಯಾ ಮಾತನಾಡಿ, ಯೋಗ ಒಂದು ಅಭ್ಯಾಸವಾಗಿ ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ. ಅದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕವಾಗಿ ಎರಡರ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅದು ನಿಮ್ಮ ರಕ್ತದ ಒತ್ತಡ ಕಡಿಮೆ ಮಾಡುವುದಾಗಲಿ ಅಥವಾ ನಿಮ್ಮ ನೋವು ಸೈಹಿಸಿಕೊಳ್ಳುವುದನ್ನು ಹೆಚ್ಚಿಸುವವುದಾಗಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ್, ವಕೀಲರಾದ ಶಂಕರ್, ರಮೇಶ್ ಕುಮಾರ್, ಆಯುಷ್ ಆರೋಗ್ಯ ಕೇಂದ್ರದ ಯೋಗ ತರಬೇತಿದಾರರಾದ ಆಶಾ. ಯೋಗ ದಂಪತಿಗಳಾದ ಆಶಾ ಮಧು, ಸಿಬ್ಬಂದಿ ಮಹದೇವ್, ಪಾಪ ಸಾಬ್, ಪರಮೇಶ್, ಮೆಹಬೂಬ್, ಅಬ್ಬುಟಿ, ಶೋಭಾ, ಲಿಂಗರಾಜ್, ಮಹೇಶ್, ಗುಲಾಬ್ ಸಾಬ್, ಕುಮಾರ್ ಮೊದಲಾದವರು ಇದ್ದರು.