ತಾಲೂಕು ಮಟ್ಟದ ಭಾಷಣ ಸ್ಪರ್ಧೆ: ಮೊಹಮ್ಮದ್ ಹರ್ಷಾದ್‌ ಪ್ರಥಮ

| Published : Aug 15 2024, 01:51 AM IST

ಸಾರಾಂಶ

ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಸಿದ್ದಾಪುರದ ಸೆಂಟನರಿ ಚರ್ಚ್ ಸಂಭಾಂಗಣದಲ್ಲಿ ‘ನವ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯಿತು. ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಯ ವಿದಾರ್ಥಿ ಮೊಹಮ್ಮದ್ ಹರ್ಷಾದ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಪ್ರೌಢಶಾಲಾ ವಿಭಾಗದ ವಿರಾಜಪೇಟೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಯ ವಿದಾರ್ಥಿ ಮೊಹಮ್ಮದ್ ಹರ್ಷಾದ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಸಿದ್ದಾಪುರದ ಸೆಂಟನರಿ ಚರ್ಚ್ ಸಂಭಾಂಗಣದಲ್ಲಿ ‘ನವ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯಿತು.

ದ್ವಿತೀಯ ಬಹುಮಾನವನ್ನು ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿ ಡೀನ್ ಸಾಲ್ವೋ ಡಿಸೋಜ, ತೃತೀಯ ಬಹುಮಾನವನ್ನು ಕಳತ್ಮಾಡುವಿನ ಲಯನ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶಕ್ತ ಚಂಗಪ್ಪ ಪಡೆದುಕೊಂಡರು.ಸಿದ್ದಾಪುರ ಸಂತ ಜೋಸೆಫರ ಚರ್ಚ್ ಧರ್ಮಗುರು ಫಾ. ಮೈಕಲ್ ಮರಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಲಭಿಸಿದ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಭಾಷಣ ಸ್ಪರ್ಧೆಗಳು ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗುತ್ತದೆ ಎಂದರು.ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭ ಭಯವನ್ನು ಬಿಟ್ಟು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂದರು.

ಸ್ಪರ್ಧೆಯ ಸಂಚಾಲಕ ಎಂ.ಎ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್ ಹಾಜರಿದ್ದರು.ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಬಹು ಸಂಸ್ಸೃತಿಯ ಭಾರತ ದೇಶದಲ್ಲಿ ಹೆಚ್ಚು ಯುವ ಜನತೆ ಇದ್ದು, ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾ ರೈ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್ ಚಂದ್ರಮೋಹನ್, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಮತ್ತಿತರರು ಮಾತನಾಡಿದರು.

ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕ ಅರ್ಜುನ್ ಮೌರ್ಯ, ನೆಲ್ಯಹುದಿಕೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಭಾಗ್ಯಜ್ಯೋತಿ, ಕಲಾವಿದ ಭಾವಾ ಮಾಲ್ದಾರೆ ತೀರ್ಪುಗಾರರಾಗಿದ್ದರು.ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆ, ಶ್ರೀ ಕೃಷ್ಣಾ ವಿದ್ಯಾ ಮಂದಿರ, ಸಂತ ಅನ್ನಮ್ಮ ಶಾಲೆ ಹಾಗೂ ಕರಡಿಗೋಡು ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ ಗಾಯನ ನಡೆಯಿತು. ವಿರಾಜಪೇಟೆ ತಾಲೂಕಿನ 31 ವಿದ್ಯಾರ್ಥಿಗಳು ಪಾಲ್ಗೊಂಡರು.