ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮದಲ್ಲಿ ನಿವೇಶನಕ್ಕಾಗಿ ಮಂಜೂರು ಮಾಡಿರುವ ಜಮೀನನ್ನು ನಿವೇಶನಕ್ಕಾಗಿಯೇ ಮೀಸಲಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೈಸೂರು ತಾಲೂಕು ಘಟಕದವರು ನಜರ್ ಬಾದ್ ನಲ್ಲಿರುವ ತಾಲೂಕು ಕಚೇರಿ (ಮಿನಿ ವಿಧಾನಸೌಧ) ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.ಕೆಂಚಲಗೂಡು ಗ್ರಾಮದ ಸ.ನಂ.14ರ 27 ಎಕರೆ 26 ಗುಂಟೆ ಪ್ರದೇಶದಲ್ಲಿ ಸುಮಾರು 70 ಕುಟುಂಬ ಬಗರ್ ಹುಕುಂ ಸಾಗುವಳಿಯನ್ನು 70 ವರ್ಷಗಳ ಹಿಂದಿನಿಂದಲೂ ಮಾಡುತ್ತಿದ್ದರು. ದರಖಾಸ್ತು ಮಂಜೂರಾಗಿ ಫಾರಂ ನಂ.50ರ ನಮೂನೆ ಅರ್ಜಿ ಕೂಡ ಸಲ್ಲಿಸಿದ್ದರು. ಮುನ್ಸಿಪಲ್ ವ್ಯಾಪ್ತಿಯಿಂದ ಕಡಿಮೆ ಅಂತರದಲ್ಲಿದೆ ಎಂದು ಸಾಗುವಳಿ ಮಂಜೂರು ಮಾಡಲು ಸಾಧ್ಯವಿಲ್ಲವೆಂದು ಸಂಬಂಧಪಟ್ಟ ಸಮಿತಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಕುಟುಂಬಕ್ಕೆ ನಿವೇಶನವನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಈ ಸರ್ವೆ ನಂಬರ್ ನ 5 ಎಕರೆ 20 ಗುಂಟೆ ಪ್ರದೇಶವನ್ನು ನಿವೇಶನಕ್ಕಾಗಿ ಮೀಸಲಿಡಲು ಸರ್ಕಾರಕ್ಕೆ ಶಿಪಾರಸು ಮಾಡಲಾಗಿದೆ. ಈ ನಡುವೆ ನಿವೇಶನಕ್ಕಾಗಿ ಕಾಯ್ದಿರಿಸಿರುವ ಸ್ಥಳದಲ್ಲಿಯೇ 1 ಎಕರೆ ಪ್ರದೇಶವನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ಮಶಾನಕ್ಕೆ ಪರ್ಯಾಯ ಜಾಗ ನೀಡಿ ನಿವೇಶನಕ್ಕಾಗಿ ಕಾಯ್ದಿರಿಸಿರುವ ಜಾಗವನ್ನು ನಿವೇಶನಕ್ಕೆ ಮೀಸಲಿಡಬೇಕು. ಈ ಸರ್ಕಾರಿ ಜಾಗದಲ್ಲಿ ಗುಂಪು ಮನೆ ನಿರ್ಮಿಸಬೇಕೆಂದು ಯೋಜನೆಯನ್ನು ರೂಪಿಸಿದ್ದು, ಗುಂಪು ಮನೆ ನಿರ್ಮಾಣ ಮಾಡಬಾರದು ಎಂದು ಅವರು ಒತ್ತಾಯಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಮುಖಂಡರಾದ ಪಿ. ಮರಂಕಯ್ಯ, ಬಸಪ್ಪ ನಾಯಕ, ಚಂದ್ರಶೇಖರ್, ರಾಘವೇಂದ್ರ ಮೊದಲಾದವರು ಇದ್ದರು.