ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ನೂರಾರು ರೈತರು ಶೇಂಗಾ ಬೆಳೆ ಸೇರಿದಂತೆ ಬೆಳೆವಿಮೆ, ಪರಿಹಾರ ಹಣ ಬಿಡುಗಡೆಗೆ ಒತ್ತಾಯಿಸಿ ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಐದುನೂೂರಕ್ಕೂ ಹೆಚ್ಚು ರೈತರು ಬಳ್ಳಾರಿ ರಸ್ತೆಯ ಗ್ರಾಮದೇವತೆ ಚಳ್ಳಕೆರೆಯಮ್ಮ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ, ನೆಹರು ವೃತ್ತದ ಮೂಲಕ ತಾಲೂಕು ಕಚೇರಿ ಮುಂದೆ ಸುಮಾರು ಹೊತ್ತು ಪ್ರತಿಭಟನೆ ನಡೆಸಿ ಸರ್ಕಾರದ ದೋರಣೆ ವಿರುದ್ಧ ಘೋಷಣೆ ಕೂಗಿದರು.

ತಾಲೂಕಿನಾದ್ಯಂತ ರೈತರಿಗೆ ಶೇಂಗಾ ಬೆಳೆಯೂ ಸೇರಿದಂತೆ ವಿವಿಧ ಬೆಳೆಗಳ ಬೆಳೆವಿಮೆ, ನಷ್ಟ ಪರಿಹಾರ ಇದುವರೆಗೂ ಬಿಡುಗಡೆಯಾಗಿಲ್ಲ. ಸಮೀಕ್ಷೆ ಸಂದರ್ಭದಲ್ಲಿ ಅಧಿಕಾರಿಗಳು ಲೋಪವೆಸಗಿದ್ದು ಇದರಿಂದ ರೈತರು ಬೆಳೆವಿಮೆ ಪರಿಹಾರದಿಂದ ವಂಚಿತರಾಗಿದ್ದಾರೆಂದು ಆರೋಪಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಸರ್ಕಾರ ರೈತ ಸಮುದಾಯಕ್ಕೆ ಯಾವುದೇ ಸೌಲಭ್ಯ ನೀಡದೆ ಕಡೆಗಣಿಸುತ್ತಿದೆ. ತಾಲೂಕಿನಾದ್ಯಂತ ಸಾವಿರಾರು ರೈತರು ಲಕ್ಷಾಂತರ ಹಣವನ್ನು ಬೆಳೆವಿಮೆ ಪಾವತಿಮಾಡಿದ್ದಾರೆ. ಆದರೆ, ಖಾಸಗಿ ಬೆಳೆವಿಮಾ ಕಂಪನಿಗಳು ಇಲ್ಲಸಲ್ಲದ ನೆಪವೊಡ್ಡಿ ರೈತರನ್ನು ವಂಚಿಸುತ್ತಿವೆ. ತಾಲೂಕಿನಲ್ಲಿ ಕೆಲವೊಂದು ಗ್ರಾಮಕ್ಕೆ ಬೆಳೆವಿಮೆ ಪಾವತಿಸಿದ್ದು ಇನ್ನೂ 12 ಗ್ರಾಪಂಗೆ ಹಣ ಬಿಡುಗಡೆಯಾಗಿಲ್ಲವೆಂದರು.ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯಮಾತನಾಡಿ, ಕಳೆದೊಂದು ವರ್ಷದಿಂದ ರೈತರು ತಾಳ್ಮೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದು, ಬೆಳೆವಿಮೆ, ನಷ್ಟಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ರೈತರ ಹಿತದೃಷ್ಠಿಯಿಂದ ಕೆಲವೊಂದು ಅಗತ್ಯಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕಿತ್ತು. ಆದರೆ, ಕೈಗೊಂಡಿಲ್ಲ. ಬೆಳೆವಿಮೆ ಪರಿಹಾರ ಕುರಿತಂತೆ ಖಾಸಗಿ ಬೆಳೆವಿಮೆ ಕಂಪನಿಗಳ ವರ್ತನೆ ರೈತರಿಗೆ ಬೇಸರ ತರಿಸಿದೆ ಎಂದರು.


ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಸರ್ಕಾರ ರೈತರನ್ನು ಶೋಷಣೆ ಮಾಡುತ್ತಿದೆ. ರೈತರು ಹಲವಾರು ಸಮಸ್ಯೆಗಳನ್ನು ಎದುರಿಸಿ ಅಲ್ಪಸ್ವಲ್ಪ ಬೆಳೆ ಬೆಳೆದಿದ್ದು, ಅದು ಪ್ರಕೃತಿ ವಿಕೋಪಕ್ಕೆ ಒಳಗಾಗಿದೆ. ಇತ್ತೀಚೆಗೆ ಬಂದ ಮಳೆ ನೂರಾರು ರೈತರ.ಬದುಕನ್ನು ಬೀದಿಗೆ ತಂದಿದೆ. ರೈತರ ಬಗ್ಗೆ ಯಾವುದೇ ಅನುಕಂಪ ಜಿಲ್ಲಾ, ತಾಲ್ಲೂಕು ಆಡಳಿತಕ್ಕಿಲ್ಲ, ವಿಶೇಷವೆಂದರೆ ಖಾಸಗಿ ಬೆಳೆವಿಮಾ ಕಂಪನಿಗಳು ರೈತರಿಗೆ ಹಣಪಾವತಿ ಮಾಡದೇ ಇದ್ದರೂ ಆ ಬಗ್ಗೆ ಕ್ರಮಕೈಗೊಳ್ಳುವ ಯಾವುದೇ ಭರವಸೆಯನ್ನು ಜಿಲ್ಲಾಡಳಿತ ನೀಡಿಲ್ಲವೆಂದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟುಹಿಡಿದಾಗ ತಹಸೀಲ್ದಾರ್ ರೇಹಾನ್‍ಪಾಷ ಜಿಲ್ಲಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿದರು. ಸ್ಥಳಕ್ಕೆ ಆಗಮಿಸಿದ ಬಿ.ಟಿ ಕುಮಾರಸ್ವಾಮಿ, ರೈತರ ಆಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ರೈತರಿಗೆ ಮಾಹಿತಿ ನೀಡಿ, ಪ್ರಸ್ತುತ ತಾಲೂಕಿಗೆ ಈ ವರ್ಷ ಒಟ್ಟು 54 ಕೋಟಿ ರು. ಹಣ ರೈತರಿಗೆ ಪಾವತಿಯಾಗಿದೆ. ಶೇಂಗಾ ಬೆಳೆ ವಿಮಾ ಹಣ 44.39 ಕೋಟಿ, ತೊಗರಿ 3.52 ಕೋಟಿ ಪ್ರಕೃತಿವಿಕೋಪದಡಿ 6.09 ಕೋಟಿ ಒಟ್ಟು 54ಕೋಟಿ ಹಣ ಬಿಡುಗಡೆಗೊಳಿಸಿದೆ. ಬೆಳೆವಿಮೆ ಸಮೀಕ್ಷೆಯಲ್ಲಿ 12ಪಂಚಾಯಿತಿ ಲೋಪವಾದ ಬಗ್ಗೆ ತನಿಖೆ ನಡೆಸಲಾಗುವುದು, ಅಧಿಕಾರಿಗಳು ಲೋಪವೆಸಗಿದರೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಡಿ.ಎಸ್.ಮಲ್ಲಿಕಾರ್ಜುನ್, ಮರ್ಲಹಳ್ಳಿರವಿಕುಮಾರ್, ಅಧ್ಯಕ್ಷ ಚಿಕ್ಕಣ್ಣ, ಚೌಳೂರುಪ್ರಕಾಶ್, ಟಿ.ಗಂಗಾಧರ, ಎನ್.ದೇವರಹಳ್ಳಿರಾಜಣ್ಣ, ಟಿ.ಹಂಪಣ್ಣ, ಸೂರಮ್ಮನಹಳ್ಳಿರಾಜು, ಶಂಕರಮೂರ್ತಿ, ಶಿವನಕೆರೆ ಕಾಂತರಾಜು, ಶಿವಕುಮಾರ್, ಕೆಆರ್‌ಎಸ್ ಪಕ್ಷದ ನಗರಂಗೆರೆ ಮಹೇಶ್, ಮಾರುತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.