ಎಲ್ಲ ಇಲಾಖೆಯವರು ತಮ್ಮ ಜವಬ್ಧಾರಿಗಳನ್ನೂ ಅರಿತು ಕೆಲಸ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರತಿ ಬಾರಿಯಂತೆ ಅತ್ಯಂತ ವೈಭವದಿಂದ ಅರ್ಥಪೂರ್ಣವಾಗಿ ಆಚರಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಾಡಹಬ್ಬಗಳ ಸಮಿತಿ ವತಿಯಿಂದ ಶನಿವಾರ ಕರೆಯಲಾಗಿದ್ದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಎಲ್ಲರ ಸಲಹೆಗಳನ್ನು ಪಡೆದು ಅವರು ಮಾತನಾಡಿದರು.ಎಲ್ಲ ಇಲಾಖೆಯವರು ತಮ್ಮ ಜವಬ್ಧಾರಿಗಳನ್ನೂ ಅರಿತು ಕೆಲಸ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕು ಎಂದರು.ಜ. 26ರ ಬೆಳಗ್ಗೆ 8ಕ್ಕೆ ಪಟ್ಟಣದ ಶ್ರೀಕೃಷ್ಣರಾಜೇಂದ್ರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಿಂದ ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆ ಹಾಗೂ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮೂಲಕ ಮೈಸೂರು-ಹಾಸನ ರಸ್ತೆ, ಗರುಡಗಂಭವೃತ್ತ, ವಿವಿ ರಸ್ತೆ, ಡಾ. ಬಾಬು ಜಗಜೀವನ ರಾಮ್ ವೃತ್ತದ ಮೂಲಕ ಸಿಎಂ ರಸ್ತೆ, ಆಂಜನೇಯ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಬಜಾರ್ ರಸ್ತೆಯ ಮೂಲಕ ಡಾ. ರಾಜಕುಮಾರ್ ಬಾನಾಂಗಳವನ್ನು ತಲುಪಲಿದೆ ಎಂದರು.ನಂತರ ಶಾಲಾ ವಿದ್ಯಾರ್ಥಿಗಳು ಪಥಸಂಚಲನ ಹಾಗೂ ಧ್ವಜ ಗೌರವ ಸಲ್ಲಿಸಿದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಶಾಲಾ ಮಕ್ಕಳು ನಿಗದಿತ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಹಾಜರಿರುವಂತೆ ನೋಡಿಕೊಳ್ಳಿ ಹಾಗೂ ಪುರಸಭಾ ಅಧಿಕಾರಿಗಳು ಪಟ್ಟಣವನ್ನು ಹಾಗೂ ಡಾ. ರಾಜಕುಮಾರ್ ಬಾನಾಂಗಳವನ್ನು ಸ್ವಚ್ಚಗೊಳಿಸಿ. ವೀಕ್ಷಕರು, ಪೋಷಕರುಗಳು ಕುಳಿತು ಕಾರ್ಯಕ್ರಮವನ್ನು ವೀಕ್ಷೀಸುವಂತೆ ಅಗತ್ಯ ಸಾಮೀಯಾನ, ಚೇರುಗಳು, ಮೈಕ್ಸಟ್ ಅಳವಡಿಸಿ ಎಂದು ಸೂಚಿಸಿದರು.ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 5 ಮಂದಿ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಕ್ಷೇತ್ರದ ಎಲ್ಲ ಜನಪ್ರತಿನಿಧಿಗಳು, ಸಂಘಟನೆಯವರು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಪರ್ವದ ಗೌರವಾಧ್ಯಕ್ಷ ಎಂ.ಜೆ.ಕುಮಾರ್, ನಿವೃತ್ತ ಶಿಕ್ಷಕ ರಾಜಯ್ಯ, ಬಿಸಿಎಂ ಇಲಾಖೆ ನಿವೃತ್ತ ನೌಕರ ರಾಮಯ್ಯ ಮಾತನಾಡಿ ಸಲಹೆಗಳನ್ನು ನೀಡಿದರು. ತಹಸೀಲ್ದಾರ್ಗಳಾದ ಜೆ.ಸುರೇಂದ್ರಮೂರ್ತಿ, ರುಕೀಯಾ ಬೇಗಂ ಮಾತನಾಡಿದರು.ವೇದಿಕೆಯಲ್ಲಿ ತಾಪಂ ಇಒಗಳಾದ ವಿ.ಪಿ.ಕುಲದೀಪ್, ರವಿ, ಬಿಇಒ ಆರ್. ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ರಮೇಶ್, ಪುರಸಭಾ ಮಾಜಿ ಅಧ್ಯಕ್ಷ ನರಸಿಂಹರಾಜ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ಮುಖಂಡರಾದ ಗ್ರಾಪಂ ಸದಸ್ಯ ಕೆ.ಪಿ. ಜಗದೀಶ್, ತಿಮ್ಮಶೆಟ್ಟಿ, ಸಿ.ಪಿ. ಶಂಕರ್, ಬೋರಶೆಟ್ಟಿ, ರಾಮಚಾರಿ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.