ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ದೈಹಿಕ, ಮಾನಸಿಕ ಮತ್ತು ಜೀವನೋತ್ಸವವನ್ನು ಯೋಗದಿಂದ ಪಡೆದು ಉತ್ತಮ ಆರೋಗ್ಯ ಪೂರ್ಣ ಜೀವನ ರೂಪಿಸಿಕೊಳ್ಳಬಹುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡಪ್ರಮೋದ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಬಿಇಒ ಕಚೇರಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಯೋಗದ ಮಹತ್ವವನ್ನು ಕುರಿತು ಮಾತನಾಡಿ, ಯೋಗದಿಂದ ಮಾನಸಿಕ ಶಾಂತಿ, ನೆಮ್ಮದಿ ಸಿಗುವುದರಿಂದ ಪ್ರತಿಯೊಬ್ಬರೂ ಯೋಗಾಭ್ಯಾಸದಲ್ಲಿ ತೊಡಗಬೇಕು. ಇದರಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ. ಯೋಗ, ಧ್ಯಾನ, ಪ್ರಾಣಾಯಾಮದಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ವಿದ್ಯಾರ್ಥಿಗಳು ಪ್ರತಿ ನಿತ್ಯ ಯೋಗ ಮಾಡುವುದರಿಂದ ಏಕಾಗ್ರತೆ ಹೊಂದಬಹುದು ಇದರಿಂದ ಕಲಿಕೆಗೆ ಪೂರಕವಾಗಲಿದೆ ಎಂದರು.ಮೈಸೂರು ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಲು, ಅಭಿವೃದ್ಧಿ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಯೋಗ ಗುರು ಕೃಷ್ಣಮಾಚಾರ್ಯರ ಮೂಲಕ ಯೋಗವನ್ನು ಅಂದು ಪರಿಚಯಿಸಿದ್ದಾಗಿ ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಅಜ್ಮತ್ ಉಲ್ಲಾಬೇಗ್, ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ನಂದಿನಿ, ಲೆಕ್ಕ ಪರಿಶೋಧಕ ಸಂತೋಷ್, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ.ಎನ್. ನಾಗಣ್ಣ, ಯೋಗಪಟು ಪಳನಿಸ್ವಾಮಿ, ಉಪನ್ಯಾಸಕರಾದ ಸ್ವಾಮಿನಾಯಕ್, ಲೋಕೇಶ್, ದೈಹಿಕ ಶಿಕ್ಷಕ ಶಿವಕುಮಾರ್, ರಾಜೇಗೌಡ, ಕೈಸರ್ ಪಾಷ ಇದ್ದರು.
ಆದಿಚುಂಚನಗಿರಿ, ಆದರ್ಶ ಪ್ರೌಢಶಾಲೆ, ವಿಶ್ವಭಾರತಿ, ಸೆಂಟ್ ಮೇರಿಸ್, ಸೆಂಟ್ ಜೋಸೆಫ್ ಶಾಲೆಗಳ 800ಕ್ಕೂ ಹೆಚ್ಚು ಮಕ್ಕಳು ಯೋಗ ಪ್ರದರ್ಶನ ನೀಡಿದರು.