ಒಳಮೀಸಲಾತಿ ಜಾರಿಗೆ ಮಾದಿಗ ಸಮಾಜದಿಂದ ತಮಟೆ ಚಳವಳಿ

| Published : Sep 28 2024, 01:16 AM IST

ಒಳಮೀಸಲಾತಿ ಜಾರಿಗೆ ಮಾದಿಗ ಸಮಾಜದಿಂದ ತಮಟೆ ಚಳವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಪ್ರೀಂ ಕೋರ್ಟ್‌ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯಕ್ಕಾಗಿ ತಾಲೂಕು ಮಾದಿಗ ಸಮಾಜದ ವತಿಯಿಂದ ಬೃಹತ್ ತಮಟೆ ಚಳವಳಿ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಸುಪ್ರೀಂ ಕೋರ್ಟ್‌ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯಕ್ಕಾಗಿ ತಾಲೂಕು ಮಾದಿಗ ಸಮಾಜದಿಂದ ಶುಕ್ರವಾರ ಬೃಹತ್ ತಮಟೆ ಚಳವಳಿ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಕೋಗಲೂರು ಎಚ್.ಪ್ರಕಾಶ್ ಮಾತನಾಡಿ, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಪರಿಶಿಷ್ಠ ಜಾತಿಗಳ ಮೀಸಲಾತಿಯನ್ನು ಉಪ ವರ್ಗೀಕರಣ ಮಾಡಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ನೀಡಿದ ತೀರ್ಪು ಐತಿಹಾಸಿಕ ತೀರ್ಪಾಗಿದ್ದು, ಮೂರು ದಶಕಗಳಿಂದ ನಡೆದ ಒಳಮೀಸಲಾತಿ ಹೋರಾಟಕ್ಕೆ ಈ ತೀರ್ಪಿನಿಂದ ತಾರ್ಕಿಕ ಪರಿಹಾರ ನೀಡಿದಂತಾಗಿದ್ದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶದಂತೆ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದರು.

ಸಂವಿಧಾನ ಬದ್ಧವಾದ ಮೀಸಲಾತಿ ಜಾರಿಯಾಗಿ 75ವರ್ಷಗಳ ಬಳಿಕವೂ ಮೀಸಲಾತಿ ಸೌಲಭ್ಯದಿಂದ ದೂರ ಉಳಿದವರಿಗೆ ಅವರವರ ಪಾಲಿನ ಸಮಪಾಲು ನೀಡಲು ಸರ್ಕಾರಗಳು ತಡಮಾಡಬಾರದು ಎಂದು ತಿಳಿಸುತ್ತಾ ಮೀಸಲಾತಿ ಅಸಮತೋಲನವು ವಂಚನೆಗೆ ಸಮವಾಗಲಿದ್ದು ರಾಜ್ಯ ಸರ್ಕಾರ ಮೀಸಲಾತಿಯಿಂದ ನಮ್ಮ ಸಮುದಾಯಗಳಿಗೆ ವಂಚನೆ ಮಾಡದೆ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಾನೇ ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ ತನ್ನ ಬದ್ಧತೆ ತೋರಿತ್ತು ಆದರೆ ಉಳಿದ ರಾಜಕೀಯ ಪಕ್ಷಗಳಿಗೆ ಒಳಮೀಸಲಾತಿ ಬಗ್ಗೆ ಸ್ಪಷ್ಟ ನಿಲುವು ತಾಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾದನೀಯ ಸಂಗತಿಯಾಗಿದೆ ಎಂದರು. ತೀರ್ಪು ಬಂದು 2-3ತಿಂಗಳು ಕಳೆದರೂ ಸಹಾ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಮುಂದಾಗುತ್ತಿಲ್ಲ ಕೂಡಲೇ ಜಾರಿಗೆ ತಂದು ರಾಜ್ಯದ ಎಡಗೈ ಸಮುದಾಯದ ಮೂರು ದಶಕಗಳ ಹೋರಾಟಕ್ಕೆ ಪರಿಹಾರ ಕಲ್ಪಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಮಾದಿಗ ಸಮಾಜದ ಮುಖಂಡರಾದ ಮಾಚನಾಯ್ಕನಹಳ್ಳಿ ಮಂಜುನಾಥ್, ಸಿ.ಆರ್.ಅಣ್ಣಯ್ಯ, ಕುಬೇಂದ್ರಸ್ವಾಮಿ, ತಿಮ್ಮಯ್ಯ, ಪಿ.ರುದ್ರಪ್ಪ, ರುದ್ರಪ್ಪ, ನಲ್ಲೂರು ಶೇಖರಪ್ಪ, ಹೊಳೆಯಪ್ಪ, ಸುರೇಶ್ ಸೇರಿದಂತೆ ಸಮಾಜ ಬಾಂದವರು ಇದ್ದರು.