ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿನ ರಾಜಕೀಯ ಪಕ್ಷಗಳು ಕರ್ನಾಟಕದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಕಾರಣಗಳಿಗಾಗಿ ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ದಬ್ಬಾಳಿಕೆ ನಡೆಸುವುದು ಸರಿಯಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ನದಿ ನೀರಿನ ವಿಚಾರವಾಗಿ ತಮಿಳುನಾಡು ಕ್ಯಾತೆ ತೆಗೆಯುವುದು ಹೊಸದೇನಲ್ಲ. ೫೦ ವರ್ಷಗಳಿಂದಲೂ ಕಾವೇರಿ ಸಮಸ್ಯೆ ಇದೆ. ಮಳೆ ಉತ್ತಮವಾಗಿ ಬಿದ್ದಾಗಲೆಲ್ಲಾ ನಿಗದಿಪಡಿಸಿದ ನೀರಿಗಿಂತ ಎರಡು-ಮೂರುಪಟ್ಟು ಹೆಚ್ಚು ನೀರು ಕೊಟ್ಟಿರುವ ದಾಖಲೆಗಳಿವೆ. ಮಳೆ ಕೊರತೆಯಿಂದ ಜಲಾಶಯಗಳೇ ತುಂಬದಿರುವಾಗ ನೀರು ಹರಿಸುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹಾಕುವುದು ನ್ಯಾಯವಲ್ಲ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ತಮಿಳುನಾಡಿನ ರಾಜಕೀಯ ಪಕ್ಷಗಳು ಎರಡೂ ರಾಜ್ಯದ ರೈತರ ಹಿತವನ್ನು ಬಯಸಬೇಕು. ಎರಡೂ ರಾಜ್ಯದವರು ಅಣ್ಣ-ತಮ್ಮಂದಿರ ರೀತಿ ಇರಬೇಕು. ಸಂಕಷ್ಟ ಕಾಲದಲ್ಲಿ ನೀರನ್ನು ಯಾವ ರೀತಿ ಹಂಚಿಕೊಳ್ಳಬೇಕೆಂಬ ಬಗ್ಗೆ ಮಾತುಕತೆ ನಡೆಸಿ ಸಿದ್ಧ ಸೂತ್ರ ರೂಪಿಸಬೇಕು. ತಮಿಳುನಾಡು ನ್ಯಾಯಯುತವಾಗಿ ಹರಿಸಬೇಕಾದ ನೀರನ್ನು ಪ್ರತಿ ವರ್ಷವೂ ಹರಿಸಲಾಗುತ್ತಿದೆ. ಅದೇ ರೀತಿ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ, ಯೋಜನೆಗಳನ್ನು ರೂಪಿಸುವುದಕ್ಕೆ ತಮಿಳುನಾಡು ಕ್ಯಾತೆ ತೆಗೆಯುವುದು, ಕಾನೂನಿನ ಮೂಲಕ ಅಡ್ಡಿಪಡಿಸುವುದು ಸರಿಯೇ. ಇದರಿಂದ ಕರ್ನಾಟಕಕ್ಕೆ ಅನ್ಯಾಯ ಮಾಡಿದಂತಲ್ಲವೇ ಎಂದು ಪ್ರಶ್ನಿಸಿದರು.ಕರ್ನಾಟಕದಲ್ಲಿರುವ ಜನರ ತೆರಿಗೆ ಹಣದಿಂದ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ದೇವೇಗೌಡರು ಪ್ರಧಾನಿಯಾಗುವವರೆಗೆ ರಾಜ್ಯದ ಅಣೆಕಟ್ಟುಗಳನ್ನು ಕಟ್ಟಲು ಕೇಂದ್ರ ಬಿಡಿಗಾಸನ್ನೂ ಕೊಟ್ಟಿಲ್ಲ. ಕಾವೇರಿ ಕಣಿವೆ ಪ್ರದೇಶದ ಅಣೆಕಟ್ಟೆಗಳು ಕೇವಲ ತಮಿಳುನಾಡಿಗೆ ನೀರು ಹರಿಸುವ ಅಣೆಕಟ್ಟೆಗಳಾಗಿ ಉಳಿದಿವೆ ಎಂದು ಬೇಸರದಿಂದ ನುಡಿದರು.
ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ಬಳಿ ಮೇಕೆದಾಟು ಯೋಜನೆ ಜಾರಿಗೆ ಮನವಿ ಮಾಡಿದ್ದೇವೆ. ತಮಿಳುನಾಡಿನ ಸರ್ಕಾರ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಸಹಮತ ನೀಡಬೇಕು. ಬೆಂಗಳೂರು ನಗರ ಹಾಗೂ ಸುತ್ತಮುತ್ತ ಕುಡಿಯುವ ನೀರಿಗೆ ಮೇಕೆದಾಟು ಉಪಯುಕ್ತ ಯೋಜನೆಯಾಗಿದೆ. ಅದಕ್ಕೂ ತಮಿಳುನಾಡಿನ ತಕರಾರಿದೆ. ಆದರೆ, ಯೋಜನೆಯಿಂದ ಅವರಿಗೂ ಅನುಕೂಲವಿದೆ ಎಂಬುದನ್ನ ಅರ್ಥಮಾಡಿಕೊಳ್ಳಬೇಕು ಎಂದರು.
ಡಿ-ನೋಟಿಫಿಕೇಷನ್ ಬೇಡ, ಯೋಜನೆ ಕೈಬಿಡಿ
ಇನ್ನು ಬಿಡದಿ ಟೌನ್‌ಶಿಪ್ ವಿಚಾರವಾಗಿ ಡಿನೋಟಿಫಿಕೇಷನ್ ಮಾಡಿ ಜೈಲಿಗೆ ಹೋಗಬೇಕಾ ಅಂತ ಡಿಕೆಶಿ ಹೇಳಿದ್ದಾರೆ. ಡಿನೋಟಿಫಿಕೇಷನ್ ಮಾಡುವ ಬದಲು ಆ ಯೋಜನೆಯನ್ನೇ ಕೈಬಿಟ್ಟರಾಯಿತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು.ಸಿದ್ದರಾಮಯ್ಯ ಕಾಲದಲ್ಲಿ ೪೫೦ ಎಕರೆ ರೀಡೂ ಹೆಸರಿನಲ್ಲಿ ಮಾಡಿದರು. ಅವರನ್ನು ಜೈಲಿಗೆ ಕಳುಹಿಸಿದರೇ. ನೀವು ಬೆನಗಾನಹಳ್ಳಿಯಲ್ಲಿ ಸತ್ತ ವ್ಯಕ್ತಿ ಕೈಯಲ್ಲಿ ಹೆಬ್ಬೆಟ್ಟು ಒತ್ತಿಸಿಕೊಂಡು ಡಿನೋಟಿಫಿಕೇಷನ್ ಮಾಡಿಸಿಕೊಂಡಿರಿ. ಆಗ ಜೈಲಿಗೆ ಹೋದಿರಾ. ಯಾವ ರೀತಿ ಕಾನೂನಿನ ಹಿಡಿತದಿಂದ ಪಾರಾಗಬಹುದು ಎಂಬುದರಲ್ಲಿ ನೀವು ಎಕ್ಸ್‌ಪರ್ಟ್. ಈ ನಾಟಕ ಬಿಟ್ಟು ಗೌರವಯುತವಾಗಿ ಅಧಿಕಾರ ಮಾಡಿ. ಒಳ್ಳೆಯ ಕೆಲಸ ಮಾಡಿದರೆ ನಮ್ಮ ಬೆಂಬಲ ಇದ್ದೇ ಇರುತ್ತೆ ಎಂದು ನೇರವಾಗಿ ಹೇಳಿದರು.
ಫಲವತ್ತಾದ ಭೂಮಿ ಕೊಡೋಲ್ಲ ಎಂದಿದ್ದೆ:೨೦೦೫ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಎಸ್‌ಇಝಡ್ ಕಾರ್ಯಕ್ರಮ ಜಾರಿಗೆ ತಂದಿದ್ದರು. ೨೦೦೭ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಇಝಡ್ ವಿಚಾರವಾಗಿ ವಿಧಾನಸಭೆಯಲ್ಲಿ ೩ ದಿನ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಿದ್ದರು. ಅಂದು ಫಲವತ್ತಾದ ೧ ಇಂಚು ಭೂಮಿಯನ್ನು ಸ್ವಾಧೀನ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಕಲಾಪದಲ್ಲಿ ಹೇಳಿದ್ದೇನೆ ಎಂದು ತಿಳಿಸಿದರು.
ಮುಂದೆ ಬಂದವರು ಏನೇನು ಮಾಡಿದ್ದಾರೆ ಅಂತ ಅವರೇ ಹೇಳಿದ್ದಾರೆ. ಈಗ ರೆಡ್‌ಜೋನ್ ಬಗ್ಗೆ ಮಾತನಾಡುತ್ತಾರೆ. ರೆಡ್‌ಜೋನ್ ಬಗ್ಗೆ ಬಾಲಕೃಷ್ಣ ಅವರೇ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ರೆಡ್‌ಜೋನ್ ಲಿಫ್ಟ್ ಮಾಡದೇ ಇದ್ದಿದ್ದರಿಂದ ಭೂಮಿ ಉಳಿತು ಎಂದು ಬಾಲಕೃಷ್ಣ ಅವರೇ ಹೇಳಿದ್ದಾರೆ.ನಿಮ್ಮ ಮನೆ ಹಣ ತಂದು ಕೊಡುತ್ತಿಲ್ಲ:
ಮಾಗಡಿ ಶಾಸಕ ಬಾಲಕೃಷ್ಣ ಚೆಕ್ ವಿತರಣೆ ಮಾಡಿರುವ ಕ್ರಮವನ್ನು ಕಟುಶಬ್ಧಗಳಲ್ಲಿ ಟೀಕಿಸಿದ ಸಚಿವ ಕುಮಾರಸ್ವಾಮಿ, ನಿಮ್ಮ ಮನೆಯಿಂದ ಹಣವನ್ನು ತಂದುಕೊಡುತ್ತಿಲ್ಲ. ಹುಡ್ಕೋದಿಂದ ೧೨ ಸಾವಿರ ಕೋಟಿ ರು. ಸಾಲ ತಂದು ನಾಟಕ ಮಾಡುತ್ತಿದ್ದೀರಿ. ಈಗೇನೋ ಸಾಲ ತಂದು ಡ್ರಾಮಾ ಮಾಡಿ ಹೋಗಿಬಿಡುತ್ತೀರಿ. ಆಮೇಲೆ ಬಂದವರು ಏನು ಮಾಡಬೇಕು. ಇಷ್ಟು ದೊಡ್ಡ ಪ್ರಮಾಣದ ಸಾಲವನ್ನು ತೀರಿಸುವುದು ಹೇಗೆ. ರಾಜ್ಯದ ಹಣಕಾಸು ಪರಿಸ್ಥಿತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಎಳ್ಳಷ್ಟು ಕಾಳಜಿ, ಎಚ್ಚರಿಕೆ ಇವರಿಗೆ ಬೇಡವೇ ಎಂದು ಕಿಡಿಕಾರಿದರು.ಒಂದು ತೆಂಗಿನ ಮರಕ್ಕೆ ೪೦ ಸಾವಿರ ರು. ಪರಿಹಾರ ಕೊಡ್ತೀನಿ ಅಂತ ಹೇಳಿದ್ದಾರೆ. ಅದರ ಅವಶ್ಯಕತೆ ಇದೆಯಾ. ಏನೂ ಬೆಳೆ ಬೆಳೆಯದಕ್ಕೆ ಆಗದ ಒಣಭೂಮಿಯನ್ನು ಈ ಯೋಜನೆಗೆ ಹುಡುಕಿಕೊಳ್ಳಿ. ಇದೇ ಜಾಗ ಬೇಕೆಂದು ಹಠ ಹಿಡಿದಿರುವುದೇಕೆ. ಫಲವತ್ತಾದ ಭೂಮಿ ಲಪಟಾಯಿಸುವುದೇ ಇವರ ಚಿಂತನೆಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಷ್ಟು ದಿನ ನಾಟಕವಾಡುತ್ತೀರಿ..?ಈಗ ಪ್ರಜಾಸೇವೆ ಇಲಾಖೆ ಮಾಡ್ತೀನಿ ಅಂತ ಹೇಳಿದ್ದಾರೆ. ಶೇವ್ ಮಾಡುವುದಕ್ಕಾಗಿ ಮಾಡುತ್ತಿದ್ದಾರೋ, ಸೇವೆ ಮಾಡೋದಕ್ಕೆ ಮಾಡಿದ್ದಾರೋ ಗೊತ್ತಿಲ್ಲ. ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂದು ಹೇಳಿದ್ದೀರಿ. ಎಷ್ಟು ದಿನ ನಾಟಕ ನಡೆಸುತ್ತೀರಿ, ನಿಮ್ಮನ್ನ ಯಾರಾದರೂ ನಂಬುತ್ತಾರಾ? ವಿಧಾನಸೌಧದಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಿಸಲು ಸಾಧ್ಯವಾ ಎಂದು ಪ್ರಶ್ನಿಸಿದರು.