‘ವಂದೇ ಮಾತರಂ’ ಅನ್ನು 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಗಿತ್ತು. 1937ರಲ್ಲಿ ರವೀಂದ್ರನಾಥ ಠಾಗೋರ್ ಅವರ ಸಲಹೆಯಂತೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ರಾಷ್ಟ್ರೀಯ ಸಭೆಗಳಲ್ಲಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ತೀರ್ಮಾನಿಸಿತ್ತು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳ: ‘ವಂದೇ ಮಾತರಂ’ ಗೀತೆಯ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಮಾಡಿರುವ ಟೀಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೆ ನೀಡಿರುವ ಅವರು, ‘ವಂದೇ ಮಾತರಂ’ ಅನ್ನು 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಗಿತ್ತು. 1937ರಲ್ಲಿ ರವೀಂದ್ರನಾಥ ಠಾಗೋರ್ ಅವರ ಸಲಹೆಯಂತೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ರಾಷ್ಟ್ರೀಯ ಸಭೆಗಳಲ್ಲಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ತೀರ್ಮಾನಿಸಿತ್ತು ಎಂದು ಹೇಳಿದ್ದಾರೆ.ಕರ್ನಾಟಕ ಸರ್ಕಾರದ ಆದೇಶದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಿಸಲಾಗುತ್ತಿದೆ. ಇದು ಸರ್ಕಾರದ ಹೊಸ ನಿರ್ಧಾರವಲ್ಲ. ಸಚಿವನಾಗಿ ಸರ್ಕಾರದ ಆದೇಶ ಪಾಲಿಸುವುದು ತಮ್ಮ ಆದ್ಯ ಕರ್ತವ್ಯ ಎಂದು ತಂಗಡಗಿ ಹೇಳಿದ್ದಾರೆ.
ಕಳೆದ ವಾರ ಗಂಗಾವತಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸರ್ಕಾರದ ಆದೇಶದಂತೆ ಎರಡು ಚರಣ ಹಾಡಿಸಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಸಂಪೂರ್ಣ ಗೀತೆ ಹಾಡಿಸಿದ ಹಿನ್ನೆಲೆಯಲ್ಲಿ, ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೆ. ತಮ್ಮ ಹೇಳಿಕೆ ಅಧಿಕಾರಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.ಸರ್ಕಾರ ಮುಂದೆ ಸಂಪೂರ್ಣ ‘ವಂದೇ ಮಾತರಂ’ ಹಾಡುವಂತೆ ಆದೇಶ ನೀಡಿದರೆ ಯಾವುದೇ ಆಕ್ಷೇಪವಿಲ್ಲ. ಈ ಕುರಿತು ಶಾಸಕರು ವಿಧಾನಸಭೆಯಲ್ಲಿ ಒತ್ತಾಯಿಸಿದರೆ ಚರ್ಚಿಸಿ ಸಮಿತಿ ರಚಿಸುವುದಾಗಿ ತಾವು ಈಗಾಗಲೇ ಹೇಳಿದ್ದಾಗಿ ತಿಳಿಸಿದ್ದಾರೆ.
‘ನನ್ನ ಸವಾಲು ಸ್ವೀಕರಿಸಿ ವಂದೇ ಮಾತರಂ ಹಾಡಿದ್ದೇನೆ, ನನ್ನ ತಾಕತ್ತನ್ನು ಪ್ರಶ್ನಿಸಿದ್ದೀರಿ’ ಎಂಬ ಸೂಲಿಬೆಲೆ ಹೇಳಿಕೆಗೆ ತಿರುಗೇಟು ನೀಡಿದ ತಂಗಡಗಿ, ‘ಗಂಡು ಮೆಟ್ಟಿದ ನಾಡು ಕೊಪ್ಪಳದ ಮಣ್ಣಿನ ಮಗ ನಾನು. ನನ್ನ ಬಳಿ ನಿಮ್ಮ ತಾಕತ್ತು ನಡೆಯುವುದಿಲ್ಲ’ ಎಂದು ಹೇಳಿದ್ದಾರೆ.ಇದೇ ವೇಳೆ ಆರ್‌ಎಸ್‌ಎಸ್‌ನ ತರಬೇತಿ ಶಿಬಿರಗಳಲ್ಲಿ ರಾಷ್ಟ್ರಗೀತೆ ಹಾಡುವ ಕುರಿತು ಪ್ರಶ್ನಿಸಿರುವ ಅವರು, ಮಹಿಳೆಯರು ಹಾಗೂ ದಲಿತರಿಗೆ ಸಮಾನ ಅವಕಾಶ ನೀಡುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.
‘ವಂದೇ ಮಾತರಂ’ಗೆ ಸಂಬಂಧಿಸಿದ 1937ರ ಕಾಂಗ್ರೆಸ್ ನಿರ್ಧಾರವು ಐತಿಹಾಸಿಕ ದಾಖಲೆಗಳಲ್ಲಿ ದಾಖಲಾಗಿದ್ದು, ಆ ಸಂದರ್ಭದಲ್ಲಿ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಸಭೆಗಳಲ್ಲಿ ಬಳಸಲು ಶಿಫಾರಸು ಮಾಡಲಾಗಿತ್ತು ಎಂದಿದ್ದಾರೆ.