ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಪಂಗಳಲ್ಲಿ ಇ-ಸ್ವತ್ತಗಳು ಹಾಗೂ ಹಣಕಾಸು ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿ ಸಂರಕ್ಷಣೆ ಮಾಡುವಂತೆ ಮಂಡ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ ಮೂರ್ತಿ ತಾಲೂಕಿನ ಎಲ್ಲಾ ಗ್ರಾಪಂಗಳಿಗೆ ಪತ್ರ ಬರೆದಿದ್ದಾರೆ.ಉಪಲೋಕಾಯುಕ್ತರ ಭೇಟಿ ಸಮಯದಲ್ಲಿ ಇಂಡುವಾಳು ಗ್ರಾಪಂನಲ್ಲಿ 1 ಏಪ್ರಿಲ್ 2021ರಿಂದ 25 ಮೇ 2025ರವರೆಗೆ ವಿತರಿಸಿರುವ ಒಟ್ಟು 1928 ಇ-ಸ್ವತ್ತುಗಳ ಪೈಕಿ 643 ಕಡತಗಳನ್ನು ಮಾತ್ರ ಹಾಜರುಪಡಿಸಿ ಉಳಿದ 1285 ಕಡತಗಳನ್ನು ಹಾಜರುಪಡಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಲ್ಲದೇ, 15 ದಿನಗಳೊಳಗೆ ಇ-ಸ್ವತ್ತುಗಳನ್ನು ಹಾಜರುಪಡಿಸುವಂತೆ ಪಿಡಿಒ, ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಜವಾಬ್ದಾರಿ ನಿಗದಿಪಡಿಸಿದ್ದರು. ಕಡತ ಹಾಜರುಪಡಿಸದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.ಮಂಡ್ಯ ತಾಲೂಕಿನ ಇಂಡುವಾಳು ಗ್ರಾಪಂ ಸೇರಿದಂತೆ ಹಲವಾರು ಗ್ರಾಪಂಗಳಲ್ಲಿ ಇ-ಸ್ವತ್ತುಗಳಿಗೆ ಸಂಬಂಧಿಸಿದಂತೆ ದಾಖಲಾತಿ ಹಾಗೂ ಕಡತಗಳನ್ನು ಕ್ರಮಬದ್ಧವಾಗಿ ನಿರ್ವಹಿಸದಿರುವುದು ಕಂಡುಬಂದಿದ್ದು, ಇದು ಗಂಭೀರ ಸ್ವರೂಪದ ಕರ್ತವ್ಯ ನಿರ್ಲಕ್ಷ್ಯವಾಗಿದೆ. ಗ್ರಾಪಂಗಳಲ್ಲಿ ನಿರ್ವಹಿಸಲ್ಪಡುವ ಆಸ್ತಿಗಳ ಇ-ಸ್ವತ್ತು ಸೃಜನೆಗೆ ಸಂಬಂಧಿಸಿದಂತೆ ದಾಖಲೆಗಳು, ಸ್ವತ್ತಿನ ಮಾಲೀಕತ್ವ, ಪರಭಾರೆ ಹಾಗೂ ಹಕ್ಕುಗಳ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳಾಗಿವೆ. ಇವುಗಳನ್ನು ಕ್ರಮಬದ್ಧವಾಗಿ ನಿರ್ವಹಣೆ ಮಾಡಿ ಸಂರಕ್ಷಿಸುವುದು ಅಧಿಕಾರಿಗಳು ಮತ್ತು ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಹಲವಾರು ಗ್ರಾಪಂಗಳ ವಿವಿಧ ಸಾಲುಗಳ ಲೆಕ್ಕ ಪರಿಶೋಧನಾ ವರದಿಯನ್ನು ಪರಿಶೀಲಿಸಿದಾಗ ಪ್ರತಿಯೊಂದು ವೆಚ್ಚಗಳಿಗೆ ಹಾಗೂ ಪಾವತಿಗಳಿಗೆ ಪೂರಕವಾದ ಓಚರ್ ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿ ಲೆಕ್ಕ ಪರಿಶೋಧನೆಗೆ ಹಾಜರುಪಡಿಸದೆ ವಸೂಲಾತಿ, ಆಕ್ಷೇಪಣೆ ಕಂಡಿಕೆಗಳು ಬಾಕಿ ಉಳಿಯಲು ಕಾರಣವಾಗಿವೆ ಎಂದು ತಿಳಿಸಿದ್ದಾರೆ.ಹಾಗಾಗಿ ತಾಲೂಕಿನ ಎಲ್ಲಾ ಗ್ರಾಪಂಗಳು ಇ-ಸ್ವತ್ತುಗಳಿಗೆ ಸಂಬಂಧಿಸಿದ ಹಾಗೂ ಹಣಕಾಸು ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಿತವಾದ ರೆಕಾರ್ಡ್ ರೂಮ್‌ನಲ್ಲಿ ರಾಕ್‌ಗಳನ್ನು ಅಳವಡಿಸಿ ಕ್ರಮಬದ್ಧವಾಗಿ ನಿರ್ವಹಿಸಿ ಸಂರಕ್ಷಣೆ ಮಾಡುವಂತೆ ಸೂಚಿಸಿದ್ದಾರೆ.
ಇ-ಸ್ವತ್ತುಗಳ ಸಂರಕ್ಷಣೆ:ಪ್ರತಿಯೊಂದು ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ಗುರುತಿನ ಸಂಖ್ಯೆ ನೀಡಿ ಪ್ರತ್ಯೇಕ ಕಡತವನ್ನು ದಪ್ಪ ರಟ್ಟಿನ ಫೈಲ್‌ನಲ್ಲಿ ಸಂರಕ್ಷಿಸುವುದು. ನಂತರ ಆಸ್ತಿಗೆ ಬರುವ ಕ್ರಯ, ಖಾತೆ ಬದಲಾವಣೆ, ಪೌತಿಖಾತೆ, ಕುಟುಂಬದಲ್ಲಿ ವಿಭಾಗ, ನಿವೇಶನದಲ್ಲಿ ಮನೆಕಟ್ಟಲು ಲೈಸೆನ್ಸ್‌ನೀಡುವ ಪ್ರತಿ, ಕಟ್ಟಡ ಸಂಬಂಧ ನೀಡುವ ನಿರಾಪೇಕ್ಷಣಾ ಪತ್ರಗಳು, ನ್ಯಾಯಾಲಯದ ಪ್ರಕರಣಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಒಂದೇ ಕಡತದಲ್ಲಿ ನಿರ್ವಹಿಸುವುದು.
ಕಡತಗಳು, ದಾಖಲಾತಿಗಳು ಲಭ್ಯವಿಲ್ಲದಿದ್ದರೆ ಆನ್‌ಲೈನ್ ಮಾಹಿತಿ ಆಧರಿಸಿ ಮಾಲೀಕರಿಂದ ದಾಖಲೆಗಳನ್ನು ಕ್ರೋಢೀಕರಿಸಿ ಕ್ರಮಬದ್ಧಗೊಳಿಸುವುದು. ಬಹು ನಿವೇಶನ ಬಡಾವಣೆಗಳು ಅಭಿವೃದ್ಧಿಯಾಗಿದ್ದಲ್ಲಿ ಆ ಬಡಾವಣೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಹಾಗೂ ದಾಖಲಾತಿಗಳನ್ನೊಳಗೊಂಡ ಪ್ರತ್ಯೇಕ ಕಡತ ನಿರ್ವಹಿಸುವಂತೆ ತಿಳಿಸಿದ್ದಾರೆ.ಆಸ್ತಿ ಗುರುತಿನ ಸಂಖ್ಯೆಗೆ ಅನುಗುಣವಾಗಿ ಕ್ರಮಸಂಖ್ಯೆವಾರು ಒಂದು ಪ್ರತ್ಯೇಕವಹಿಯಲ್ಲಿ ನಮೂದಿಸಿ ಕಡತದ ಚಲನ-ವಲನವನ್ನು ದಾಖಲಿಸುವುದು. ಗ್ರಾಪಂ ಅಭಿಲೇಖಾಲಯಕ್ಕೆ ಸಂಬಂಧಿಸಿದಂತೆ ತಂತ್ರಾಂಶ ಅಭಿವೃದ್ಧಿಪಡಿಸಿಕೊಂಡು ನಿರ್ವಹಿಸಬಹುದು.
ಈ ಪ್ರಕ್ರಿಯೆಯನ್ನು ನ.29ರೊಳಗೆ ಪೂರ್ಣಗೊಳಿಸಿ ಇ-ಸ್ವತ್ತು, ಅಭಿಲೇಖಾಲಯದ ವಹಿಯ ಪ್ರತಿ ಹಾಗೂ ವರದಿ ಮತ್ತು ಛಾಯಾಚಿತ್ರಗಳನ್ನು ಸಲ್ಲಿಸಬೇಕು. ಈ ದಿನಾಂಕದ ಬಳಿಕ ಇ-ಸ್ವತ್ತು ಕಡತಗಳ ನಿರ್ವಹಣೆಯಲ್ಲಿ ನ್ಯೂನತೆ ಕಂಡುಬಂದರೆ ನೇರವಾಗಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.ಹಣಕಾಸು ಲೆಕ್ಕ ಪತ್ರ ನಿರ್ವಹಣೆ:
ಗ್ರಾಪಂನಿಂದ ನಿರ್ವಹಿಸಲಾಗುವ ಪ್ರತಿ ಅಭಿವೃದ್ಧಿ ಕಾಮಗಾರಿಗೂ ಡಿ.ಸಿ.ಬಿಲ್‌ವಾರು ಪ್ರತ್ಯೇಕ ಕಡತ ನಿರ್ವಹಿಸುವುದು. ಕಾಮಗಾರಿಯ ಅನುಮೋದಿತ ಕ್ರಿಯಾಯೋಜನೆ, ಅಂದಾಜು ವೆಚ್ಚ, ಬಿಲ್ ಹಾಗೂ ಅಳತೆ ಪುಸ್ತಕದ ದೃಢೀಕೃತ ಪ್ರತಿ ಹಾಗೂ ಬಿಲ್ ಪಾವತಿಸಿರುವ ವಿವರಗಳನ್ನೊಳಗೊಂಡ ಮಾಹಿತಿಗಳನ್ನು ಕಡತದಲ್ಲಿಯೇ ನಿರ್ವಹಿಸುವುದು.ಯಾವುದೇ ಸಾಮಗ್ರಿ ಖರೀದಿ, ಸರಕು ಸೇವೆಗಳ ಬಳಕೆ, ಇತರೆ ವಿಷಯಗಳನ್ನೂ ಅದರಲ್ಲಿಯೇ ದಾಖಲಿಸುವುದು. ಎಲ್ಲಾ ಲೆಕ್ಕಪತ್ರಗಳ ದಾಖಲೆಗಳು ಹಾಗೂ ವರದಿಗಳನ್ನು ಕಡ್ಡಾಯವಾಗಿ ಅಭಿಲೇಖಾಲಯದಲ್ಲೇ ನಿರ್ವಹಣೆ ಮಾಡಿ ಸಂರಕ್ಷಿಸುವಂತೆ ಸೂಚನೆ ನೀಡಿದ್ದಾರೆ.
ಎಲ್ಲಾ ಪಂಚಾಯ್ತಿಗಳು ಇ-ಸ್ವತ್ತು ಹಾಗೂ ಹಣಕಾಸು ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ವರದಿಯನ್ನು ಡಿ.1ರೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು. ಇಲ್ಲದಿದ್ದರೆ ಮೇಲಧಿಕಾರಿಗಳಿಗೆ ಶಿಸ್ತು ಕ್ರಮಕ್ಕೆ ವರದಿ ಮಾಡಲಾಗುವುದು.ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕರು ಹಾಗೂ ಮೇಲುಕೋಟೆ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸಹಾಯಕ ನಿರ್ದೇಶಕರು ನ.17ರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಇ-ಸ್ವತ್ತು ಮತ್ತು ಹಣಕಾಸು ಲೆಕ್ಕಪತ್ರ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸುವರು. ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ತೋರುವ ಗ್ರಾಪಂಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
;Resize=(128,128))
;Resize=(128,128))